ನೆಲಮಂಗಲ: ಕಟಾವಿಗೆ ಬಂದಿದ್ದ ತೊಗರಿಬೆಳೆಯನ್ನ ಜೆಸಿಬಿ ಯಂತ್ರದ ಮೂಲಕ ನಾಶ ಮಾಡುತ್ತಿದ್ದ ವೇಳೆ ತಡೆಯಲು ಮುಂದಾದ ಯುವಕನ ಮೇಲೆ ಕೋಲು ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹೇಶ್ (28) ಹಲ್ಲೆಗೊಳಗಾದ ಯುವಕ. ತೊಗರಿಬೆಳೆ ನಾಶ ಮಾಡುತ್ತಿರುವವನ್ನು ತಡೆಯಲು ಹೋದ ವೇಳೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬರಗೇನಹಳ್ಳಿ ಗ್ರಾಮ ಸೋಂಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮ, ಇಲ್ಲಿ ಒಂದೊಂದು ಅಡಿಗೂ ಬಂಗಾರದ ಬೆಲೆ ಇದೆ. ಇದನ್ನ ಕಬಳಿಸುವ ನಿಟ್ಟಿನಲ್ಲಿ ಈ ಘಟನೆ ನಡೆದಿದೆ.
ಐದಾರು ಕಾರುಗಳಲ್ಲಿ ಬಂದಿದ್ದ ಸುಮಾರು 15-20 ಜನರ ತಂಡ ಉದ್ದೇಶ ಪೂರ್ವಕವಾಗಿ ಬೆಳೆಯನ್ನ ನಾಶ ಮಾಡಿದ್ದಾರೆ. ಕಾರುಗಳಲ್ಲಿ ರಾಡು, ಬಡಿಗೆಗಳನ್ನ ತಂದು ತೊಗರಿಬೆಳೆಯನ್ನ ಸಂಪೂರ್ಣ ನಾಶಮಾಡಿದ್ದು, ಜಮೀನು ಕಬಳಿಸುವ ದುರುದ್ದೇಶದಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಗಾಯಗೊಂಡ ಯುವಕ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ನ್ಯಾಯಯುತವಾಗಿ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡ ಯುವಕ ಆಗ್ರಹಿಸಿದ್ದಾರೆ.