– ಅಂತ್ಯಕ್ರಿಯೆಗೆ ಹಣವಿಲ್ಲದೆ ಬಿಟ್ಟೋದೆ
ಹೈದರಾಬಾದ್: ಮಗನೊಬ್ಬ 70 ವರ್ಷದ ತಾಯಿಯ ಮೃತದೇಹವನ್ನು ಫುಟ್‍ಪಾತ್‍ನಲ್ಲೇ ಬಿಟ್ಟು ಹೋಗಿರುವ ಘಟನೆ ಹೈದರಾಬಾದ್‍ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.
ಕಳೆದ ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಳು. ಆದರೆ ಆಕೆಯ ಮಗ ಅಂತಿಮ ವಿಧಿ-ವಿಧಾನಗಳನ್ನು ಮಾಡಲು ಹಣವಿಲ್ಲದ ಕಾರಣ ತಾಯಿಯ ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕೆಲ ಸ್ಥಳೀಯ ನಿವಾಸಿಗಳು ಮೃತದೇಹವನ್ನು ಕಂಬಳಿಯಲ್ಲಿ ಸುತ್ತಿರುವುದನ್ನು ನೋಡಿದ್ದು, ನಂತರ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ತಂಡ ಮೃತದೇಹವನ್ನು ಶವಗಾರಕ್ಕೆ ರವಾನಿಸಿದ್ದಾರೆ. ಮಹಿಳೆ ಈ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತಿದ್ದಳು. ಆಕೆಯ ಮಗ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಚ್‍ಮೆನ್ ಆಗಿ ಕೆಲಸ ಮಾಡುತ್ತಿದ್ದನು. ಮಹಿಳೆ ಮಗನೊಂದಿಗೆ ವಾಸಿಸುತ್ತಿದ್ದಳು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕಳೆದ ನಾಲ್ಕು ದಿನಗಳಿಂದ ಮಹಿಳೆ ಜ್ವರದಿಂದ ಬಳಲುತ್ತಿದ್ದು, ಶನಿವಾರ ರಾತ್ರಿ ಮೃತಪಟ್ಟಿದ್ದಾಳೆ. ನಂತರ ಆಕೆಯ ಮಗ ತಾಯಿಯ ಅಂತ್ಯಸಂಸ್ಕಾರ ಮಾಡಲು ಹಣವಿಲ್ಲದ ಕಾರಣ ಕಂಬಳಿಯಲ್ಲಿ ಸುತ್ತಿ ಮೃತದೇಹವನ್ನು ಫುಟ್‍ಪಾತ್ ಮೇಲೆ ಬಿಟ್ಟು ಹೋಗಿದ್ದಾನೆ. ಅಲ್ಲದೇ ಜ್ವರದಿಂದ ಮೃತಪಟ್ಟಿರುವುದರಿಂದ ಕಟ್ಟಡದ ಮಾಲೀಕರಿಂದಲೂ ತೊಂದರೆಯಾಗಿದೆ ಎಂದು ಮಗ ಹೇಳಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.