ಶಿವಮೊಗ್ಗ: ಕಂಪ್ಲಿ ಶಾಸಕ ಗಣೇಶ್‍ಗೆ ತಲೆ ಸರಿ ಇಲ್ಲ. ಏನು ಗೊತ್ತಿಲ್ಲದೇ ಶಾಸಕರಾಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ಗುರುವಾರ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಇಲಾಖೆಯ ಅನುದಾನ ಬಿಡುಗಡೆಗೆ ಕಮೀಷನ್ ಪಡೆಯುತ್ತಾರೆ. ಕಮೀಷನ್ ನೀಡದಿದ್ದರೆ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂದು ಕಂಪ್ಲಿ ಶಾಸಕ ಗಣೇಶ್ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ ಸಚಿವರು, ಶಾಸಕ ಗಣೇಶ್‍ಗೆ ಈ ಹಿಂದೆ ನನ್ನ ಇಲಾಖೆಗೆ ಸಂಬಂಧಿಸಿದ ಹಲವು ಕೆಲಸ ಮಾಡಿಕೊಟ್ಟಿದ್ದೇನೆ. ಆಗ ಎಷ್ಟು ಎಷ್ಟು ಕಮೀಷನ್ ಕೊಟ್ಟಿದ್ದಾರೆ ಅಂತಾ ತಿಳಿಸಲಿ. ಅದನ್ನು ಬಹಿರಂಗ ಮಾಡಲಿ ಎಂದು ಸಚಿವ ಈಶ್ವರಪ್ಪ ಸವಾಲು ಹಾಕಿದರು.
ಶಾಸಕ ಗಣೇಶ್ ಅವರ ನಾಯಕರಾದ ಸಿದ್ದರಾಮಯ್ಯ ಹಣಕಾಸು ಸಚಿವರು ಆಗಿದ್ದರು. ಈ ರೀತಿ ಹಣ ಬಿಡುಗಡೆ ಮಾಡುವುದಕ್ಕೆ ಬರುತ್ತಾ ಇಲ್ಲವಾ ಅಂತಾ ಅವರನ್ನೇ ಕೇಳಿಕೊಳ್ಳಲಿ. ಈ ರೀತಿ ವಿನಾಃ ಕಾರಣ ಆರೋಪ ಮಾಡುವ ಶಾಸಕರಿಗೆ ಜನರು ಯಾವ ಸಂದರ್ಭದಲ್ಲಿ ಬುದ್ದಿ ಕಲಿಸುತ್ತಾರೋ, ಆ ಸಂದರ್ಭದಲ್ಲಿ ಬುದ್ದಿ ಕಲಿಸುತ್ತಾರೆ ಎಂದರು.
ಗ್ರಾಮೀಣಾಭಿವೃದ್ಧಿ ರಸ್ತೆಗಳ ಅಭಿವೃದ್ಧಿಗೆ 1,200 ಕೋಟಿ ರೂ ಹಣವನ್ನು ಮುಖ್ಯಮಂತ್ರಿ ಅವರು ನೇರವಾಗಿ ಶಾಸಕರಿಗೆ ಕೊಟ್ಟಿದ್ದರು. ಈ ರೀತಿ ಹಣವನ್ನು ಶಾಸಕರಿಗೆ ಕೊಡಲು ಬರುವುದಿಲ್ಲ ಅಂತಾ ತಿಳಿಸಿದ್ದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ, ರಾಜ್ಯಪಾಲರಿಗೆ ಪತ್ರ ಬರೆದು ಮನವರಿಕೆ ಮಾಡಿಕೊಟ್ಟಿದ್ದೆ. ಹೀಗಾಗಿಯೇ ಮುಖ್ಯಮಂತ್ರಿ ಅವರು ಆ ಆದೇಶವನ್ನು ಹಿಂಪಡೆದುಕೊಂಡು ಇಂದು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹಣವನ್ನು ನೀಡಿದ್ದಾರೆ ಎಂದರು.