– ಚಾಲಕ ಸೇರಿದಂತೆ ಐವರ ದುರ್ಮರಣ
ಲಕ್ನೋ: ಶವ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತಕ್ಕೊಳಗಾದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಬದೋಹಿ ಜಿಲ್ಲೆಯ ಗೋಪಿಗಂಜ್ ವ್ಯಾಪ್ತಿಯ ಮಾಧೋಪುರ ಮಾರ್ಗದ ಹೆದ್ದಾರಿಯಲ್ಲಿ ನಡೆದಿದೆ.
ಅಂಬುಲೆನ್ಸ್ ಪಶ್ಚಿಮ ಬಂಗಾಳದಿಂದ ರಾಜಸ್ಥಾನಕ್ಕೆ ಶವವನ್ನ ರವಾನಿಸುತ್ತಿತ್ತು. ಬೆಳಗಿನ ಜಾವ ಚಾಲಕ ನಿದ್ದೆಗೆ ಜಾರಿದ್ದರಿಂದ ಹೆದ್ದಾರಿಯಲ್ಲಿ ನಿಂತಿದ್ದ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಮತ್ತು ಆತನ ಜೊತೆಯಲ್ಲಿದ್ದ ಸಹಾಯಕ ಮತ್ತು ಮೂವರು ಸಾವನ್ನಪ್ಪಿದ್ದಾರೆ.
ರಾಜಸ್ಥಾನದ ಚಿತ್ತೋಡಗಢ ನಿವಾಸಿ ವಿಪಿನ್ ಪಾಲ್ ಸಿಂಗ್ (30) ಪಶ್ಚಿಮ ಬಂಗಾಳದ ಕೋಲ್ ಇಂಡಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ವಿಪಿನ್ ನಿಧನರಾಗಿದ್ದರಿಂದ ಶವ ತೆಗೆದುಕೊಂಡು ಹೋಗಲು ಅಣ್ಣ ನವನೀತ್ ಇಬ್ಬರು ಗೆಳೆಯರ ಜೊತೆ ಆಗಮಿಸಿದ್ದರು. ಶವವನ್ನ ಊರಿಗೆ ಒಯ್ಯಲು ನವನೀತ್ ಖಾಸಗಿ ಅಂಬುಲೆನ್ಸ್ ಬಾಡಿಗೆಗೆ ಪಡೆದುಕೊಂಡಿದ್ದರು. ಬದೋಹಿ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಅಪಘಾತ ಸಂಬಂಧಿಸಿದ್ದು, ಶವ ಒಯ್ಯಲು ಬಂದವರು ಹೆಣವಾಗಿದ್ದಾರೆ. ಚಾಲಕನನ್ನ ರಾಕೇಶ್ ಎಂದು ಗುರುತಿಸಲಾಗಿದ್ದು, ಇನ್ನುಳಿದ ಮೂವರು ಗುರುತು ಪತ್ತೆಯಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಆರು ಶವಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅಪಘಾತಕ್ಕೊಳಗಾದ ಅಂಬುಲೆನ್ಸ್ ಒಡೆತನದ ಆಸ್ಪತ್ರೆಗೆ ಮಾಹಿತಿ ನೀಡಲಾಗಿದೆ. ಅಂಬುಲೆನ್ಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.