– 50 ಜನ ಸಮೂಹದಿಂದ ಹಲ್ಲೆ, ಮೆರವಣಿಗೆ
ರಾಂಚಿ: ವಾಮಾಚಾರವನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 50 ಜನರ ಗುಂಪೊಂದು ಮೂವರು ಮಹಿಳೆಯರು ಮತ್ತು ಓರ್ವ ವ್ಯಕ್ತಿಯನ್ನು ಥಳಿಸಿದ್ದಾರೆ. ಅಲ್ಲದೇ ಬೆತ್ತಲು ಮಾಡಿ ಅವರನ್ನು ಹಳ್ಳಿಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.
ನಾಲ್ವರನ್ನು ಬಟ್ಟೆ ಇಲ್ಲದೆ ಮೆರವಣಿಗೆ ನಡೆಸಲಾಗಿದೆ. ನಾರಾಯಣಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮಗೆ ಮಾಹಿತಿ ಬಂದ ಕೂಡಲೇ ಪೊಲೀಸರ ಒಂದು ತಂಡವನ್ನು ಗ್ರಾಮಕ್ಕೆ ಕಳುಹಿಸಲಾಯಿತು. ಈ ವೇಳೆ ಸುಮಾರು 50 ಜನರು ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಇತರರು ಓಡಿಹೋಗಿದ್ದಾರೆ. ಮೊದಲಿಗೆ ಪೊಲೀಸರು ಮಹಿಳೆಯರಿಗೆ ಮತ್ತು ಪುರುಷನಿಗೆ ಬಟ್ಟೆಗಳನ್ನು ನೀಡಿದ್ದಾರೆ. ನಂತರ ಇಬ್ಬರು ಆರೋಪಿಗಳಾದ ರವಿ ಕುಮಾರ್ ಮತ್ತು ವಾಸುದೇವ್‍ನನ್ನು ಸದರ್ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿ ಬ್ರಾಹ್ಮಣ ತುಟ್ಟಿ ತಿಳಿಸಿದರು.
ಗ್ರಾಮದ ನಿವಾಸಿ ಬಾಲಿ ರಾಜ್ವಾರ್ ಅವರ ಇಬ್ಬರು ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರು ಮತ್ತು ಪುರುಷನನ್ನು ವಾಮಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮನೆಯಿಂದ ಹೊರಗೆ ಕರೆದುಕೊಂಡು ಬಂದು ಥಳಿಸಿದ್ದಾರೆ. ರಾಜ್ವಾರ್ ಕುಟುಂಬದ ವಿಕಾಸ್ ಕುಮಾರ್ ಸಾ, ಬಬ್ಲು ರಾಮ್, ರಜಾದ್ ಪಾಸ್ವಾನ್, ರವಿ ಕುಮಾರ್ ರಾಮ್ ಮತ್ತು ರಾಜು ರಾಮ್ ಸೇರಿದಂತೆ ಮೂವರು ಮಹಿಳೆಯರಿಗೆ ಥಳಿಸಿದ್ದಾರೆ. ನಂತರ ಗ್ರಾಮದಲ್ಲಿ ಬೆತ್ತಲಾಗಿದೆ ಮೆರವಣಿಗೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಲವು ಗ್ರಾಮಸ್ಥರು ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ನಾರಾಯಣಪುರದ ವಾರ್ಡ್ ಕೌನ್ಸಿಲರ್ ಬಂದು ಜನಸಮೂಹವನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರೂ ಅವರ ಮಾತನ್ನು ಕೇಳಲಿಲ್ಲ.
ಈ ಘಟನೆಯಲ್ಲಿ ಸುಮಾರು 50 ಜನರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಸದ್ಯಕ್ಕೆ ಅವರಿಗಾಗಿ ಶೋಧ ನಡೆಯುತ್ತಿದೆ. ಯಾವುದೇ ಸಂದರ್ಭದಲ್ಲೂ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಪರಾರಿಯಾಗಿದ್ದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಜೊತೆಗೆ ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.