– ರಸ್ತೆಯಲ್ಲೇ ಹಲ್ಲೆ ಮಾಡಿದ ಗುಂಪು
– ಕೊಲೆಯ ದೃಶ್ಯ ಸಿಸಿಟಿಯಲ್ಲಿ ಸೆರೆ
ತಿರುವನಂತಪುರಂ: ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ (ಡಿವೈಎಫ್‍ಐ) ಇಬ್ಬರು ಕಾರ್ಯಕರ್ತರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮೃತರನ್ನು ಮಿಥಿಲಾಜ್ (30) ಮತ್ತು ಹಕ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ತಿರುವನಂತಪುರಂ ಜಿಲ್ಲೆಯ ತೆಂಬಮೂಡ್‍ನಲ್ಲಿ ಭಾನುವಾರ ಮಧ್ಯರಾತ್ರಿ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ದಾಳಿಯಿಂದ ಮಿಥಿಲಾಜ್ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೊಹಮ್ಮದ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕಿನಲ್ಲಿ ಮಿಥಿಲಾಜ್ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ಹಲ್ಲೆ ನಡೆಸಿದೆ. ಹಲ್ಲೆ ಮಾಡಿರುವ ದೃಶ್ಯ ಆ ಪ್ರದೇಶದ ಸಿಸಿಟಿಯಲ್ಲಿ ಸೆರೆಯಾಗಿದೆ. ಗುಂಪಿನಲ್ಲಿ ಎಂಟು ಜನರಿದ್ದು, ರಸ್ತೆಯಲ್ಲಿಯೇ ಇಬ್ಬರು ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಒಬ್ಬ ಅವರಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಆದರೆ ಗುಂಪು ಆತನನ್ನು ಬೆನ್ನಟ್ಟಿ ಹಲ್ಲೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಕೊಂಡಿದ್ದಾರೆ. ತಿರು ಓಣಂ ಮುನ್ನಾದಿನ ತಮ್ಮ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ ಎಂದು ಡಿವೈಎಫ್‍ಐ ಆರೋಪಿಸಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹತ್ಯೆಯನ್ನು ಖಂಡಿಸಿದ್ದು, ಕೊಲೆಯ ಹಿಂದಿರುವ ಆರೋಪಿಗಳನ್ನು ಹಿಡಿಯಲು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೊಲೆಗೆ ನಿಖರ ಕಾರಣ ಮತ್ತು ಹತ್ಯೆ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎಂದು ಮುಹಮ್ಮದ್ ಮತ್ತು ಮಿಥಿಲಾಜ್ ಇಬ್ಬರ ಸಾವಿಗೆ ಸಂತಾಪ ಸೂಚಿಸಿದ್ದಾರೆ.