ಓಂ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

Public TV
2 Min Read
OM

ಯಾವುದೇ ಒಂದು ಯಶಸ್ವೀ ದೃಷ್ಯಕಾವ್ಯದ ಹಿಂದೆಯೂ ಮೈ ನವಿರೇಳಿಸುವಂತಹ ನೈಜ ಘಟನಾವಳಿಗಳಿರುತ್ತವೆ. ಸಕಾರಾತ್ಮಕವಾದ ಅಂಶಗಳೆಲ್ಲವೂ ಹಾಗೆ ಒಗ್ಗೂಡದೇ ಹೋದರೆ ಹೊಸತನದ ಸಿನಿಮಾಗಳು ಹುಟ್ಟು ಪಡೆಯೋದು ಕಷ್ಟಸಾಧ್ಯ. ಹಾಗಿದ್ದ ಮೇಲೆ ಕನ್ನಡ ಚಿತ್ರರಂಗದ ಪಾಲಿಗೆ ಹೊಸತನದ ಬಿರುಗಾಳಿ ಬೀಸುವಂತೆ ಮಾಡಿದ್ದ `ಓಂ’ ಚಿತ್ರದ ಹಿಂದೆ ಇಂತಹ ಕಥೆಗಳು ಇಲ್ಲದಿರಲು ಸಾಧ್ಯವೇ? ಈ ಸಿನಿಮಾಗೆ ಸಿಲ್ವರ್ ಜ್ಯುಬಿಲಿ ಸಂಭ್ರಮ ಎದುರುಗೊಂಡಿರೋ ಈ ಘಳಿಗೆಯಲ್ಲಿ ಹುಡುಕುತ್ತಾ ಹೋದರೆ ಅದರ ಕಥೆಯಂತದ್ದೇ ವಿಶಿಷ್ಟ ಕಥಾನಕಗಳು ಎದುರುಗೊಳ್ಳುತ್ತವೆ.

UPPI

ಇದು ರಿಯಲ್ ಸ್ಟಾರ್ ಉಪೇಂದ್ರ ಸೃಷ್ಟಿಸಿದ ದೃಶ್ಯವೈಭವ. ಕೌಟುಂಬಿಕ ಕಥಾನಕಗಳು, ಒಂದಷ್ಟು ಸಸ್ಪೆನ್ಸ್ ಥ್ರಿಲ್ಲರ್ ಪಥದತ್ತ ಹೊರಳಿಕೊಂಡಿದ್ದ ಕಾಲವದು. ಅಂತಹ ಸಮಯದಲ್ಲಿ ಹೊರಜಗತ್ತಿನಲ್ಲಿ ಗುಟುರು ಹಾಕುತ್ತಿದ್ದ ಭೂಗತದ ಕಥೆಯನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಂತಹ ಸಾಹಸವನ್ನು ಉಪ್ಪಿ ತಣ್ಣಗೆ ಮಾಡಿ ಮುಗಿಸಿದ್ದರು. ಇಂತಹ ಬದಲಾವಣೆಗಳಿವೆಯಲ್ಲಾ? ಅದಕ್ಕೆ ಮುಂದಾಗುವಾಗ ಎಲ್ಲದಕ್ಕೂ ಎದೆಗೊಡುವಂತಹ ಗಟ್ಟಿತನ ಮತ್ತು ಬಂದದ್ದನ್ನು ಬಂದಂತೆ ಸ್ವೀಕರಿಸುವ ಅಚಲ ಮನೋಧರ್ಮವೂ ಇರಬೇಕಾಗುತ್ತದೆ.

363600

ಯಾಕೆಂದರೆ, ಒಂದು ಬಗೆಯ ಸಿನಿಮಾಗಳಿಗೆ ಒಗ್ಗಿಕೊಂಡ ಪ್ರೇಕ್ಷಕರನ್ನು, ಅದರಲ್ಲಿಯೂ ಕೌಟುಂಬಿಕ ಪ್ರೇಕ್ಷಕರನ್ನು ರೌಡಿಸಂನಂತಹ ರಾ ಸಬ್ಜೆಕ್ಟಿನಲ್ಲಿಯೂ ತೃಪ್ತಗೊಳಿಸೋದೆಂದರೆ ಸಾಮಾನ್ಯದ ಸಂಗತಿಯೇನಲ್ಲ. ಅದನ್ನು ಸಲೀಸಾಗಿಯೇ ಉಪ್ಪಿ ಸಾಧ್ಯವಾಗಿಸಿದ್ದರು. ಈ ಎಲ್ಲದಕ್ಕಿಂತಲೂ ಮಿಗಿಲಾಗಿ ಸದರಿ ಸಿನಿಮಾದ ಸುತ್ತಾ ವರನಟ ಡಾ.ರಾಜ್‍ಕುಮಾರ್ ಅವರ ಇರುವಿಕೆ ಇರೋದು ನಿಜಕ್ಕೂ ದಾಖಲಾರ್ಹವಾದ ವಿಚಾರ. ಈ ಸಿನಿಮಾಗೆ ಶಿವರಾಜ್‍ಕುಮಾರ್ ನಾಯಕ ಅಂತ ನಿಕ್ಕಿಯಾಗಿ, ಅದನ್ನು ಖುದ್ದು ಪಾರ್ವತಮ್ಮ ರಾಜ್‍ಕುಮಾರ್ ಅವರೇ ನಿರ್ಮಾಣ ಮಾಡಲು ಒಪ್ಪಿಕೊಂಡ ನಂತರದಲ್ಲಿ ಎಂದಿನಂತೆ ರಾಜ್ ಅವರು ಎಲ್ಲದರ ಬಗ್ಗೆಯೂ ವಿಶೇಷವಾದ ಆಸ್ಥೆ ವಹಿಸಿ ಗಮನಿಸಲಾರಂಭಿಸಿದ್ದರು.

B24BwAmCIAAGLrp

ಈ ಕಥೆಯನ್ನು ಉಪ್ಪಿ ರಾಜ್ ಅವರ ಕೈಗಿಟ್ಟಾಗ ಅದರ ಪುಟವೊಂದರಲ್ಲಿ ಅವರು ಓಂ ಎಂದು ಬರೆದಿದ್ದರಂತೆ. ಆ ಘಳಿಗೆಯವರೆಗೂ ಉಪ್ಪಿ ಈ ಸಿನಿಮಾಗೆ `ಸತ್ಯ’ ಎಂಬ ಶೀರ್ಷಿಕೆಯನ್ನೇ ನಿಗಧಿ ಮಾಡಿಕೊಂಡಿದ್ದರು. ಯಾವಾಗ ರಾಜಣ್ಣ ಓಂ ಎಂದು ಬರೆದರೋ ಆ ಘಳಿಗೆಯಲ್ಲಿಯೇ ಉಪ್ಪಿ ಅದನ್ನೇ ಶೀರ್ಷಿಕೆಯಾಗಿಟ್ಟರೆ ಚೆನ್ನಾಗಿರುತ್ತದೆಂಬ ಗುಂಗೀಹುಳವನ್ನು ಮನಸಿಗೆ ಬಿಟ್ಟುಕೊಂಡಿದ್ದರಂತೆ. ಕಡೆಗೂ ಅದರಿಂದ ತಪ್ಪಿಸಿಕೊಳ್ಳಲಾಗದೆ ಅದನ್ನೇ ಶೀರ್ಷಿಕೆಯಾಗಿ ನಿಕ್ಕಿ ಮಾಡಿದ್ದರು. ಆ ನಂತರದಲ್ಲಿ ರಾಜ್‍ಕುಮಾರ್ ಅವರು ಈ ಚಿತ್ರಕ್ಕೆ ಎರಡು ಹಾಡುಗಳನ್ನು ಹಾಡಿದ್ದು, ಅವೆರಡೂ ಕೂಡ ಹಂಸಲೇಖಾರ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಅಜರಾಮರವಾಗುಳಿದಿದ್ದೆಲ್ಲವೂ ಈಗ ಇತಿಹಾಸ.

d

Share This Article
Leave a Comment

Leave a Reply

Your email address will not be published. Required fields are marked *