ಒಬ್ಬರನ್ನ ಉಳಿಸಲೆಂದು 6 ಜನ ನದಿಗೆ ಧುಮುಕಿದ್ರು – ಮೂವರ ಶವ ಪತ್ತೆ, ಮಕ್ಕಳಿಗಾಗಿ ಶೋಧ

Public TV
2 Min Read
RIVER Death F

– ಒಂದೇ ಕುಟುಂಬದ ಆರು ಜನರು
– ನದಿ ದಡದಲ್ಲಿ ಕುಟುಂಬಸ್ಥರ ಆಕ್ರಂದನ
– ಗ್ರಾಮದಲ್ಲಿ ಸ್ಮಶಾನ ಮೌನ

ಚಂಡೀಗಢ: ಒಂದೇ ಕುಟುಂಬದ ಆರು ಜನ ನದಿಯಲ್ಲಿ ಮುಳುಗಿರುವ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯ ಜಲ್ಮಾನಾ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಕುಟುಂಸ್ಥರು ಯಮುನಾ ನದಿ ದಡದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಆರು ಜನರಲ್ಲಿ ಮೂವರ ಶವ ಪತ್ತೆಯಾಗಿದ್ದು, ಮಕ್ಕಳಿಗಾಗಿ ಶೋಧ ಕಾರ್ಯ ಮುಂದುವರಿದೆ.

river death 1

ನದಿ ದಡದಲ್ಲಿ ವಾಯು ವಿಹಾರಕ್ಕಾಗಿ ಸುಶೀಲ್ ಕುಟುಂಬದವರ ಜೊತೆ ತೆರಳಿದ್ದರು. ಸುಶೀಲ್ ಜೊತೆಯಲ್ಲಿ ಪತ್ನಿ ಸೋನಿಯಾ (32), ಮಕ್ಕಳಾದ ಸಾಗರ್ (15), ಪಾಯಲ್ (12), ಸಂಬಂಧಿ ಸರೀತಾ (18), ಸಂಬಂಧಿಯ ಮಕ್ಕಳಾದ ಬಾದಲ್ (18) ಮತ್ತು ಗರ್ವ್ (16) ಜೊತೆಯಾಗಿ ವಾಕಿಂಗ್ ಗೆ ಬಂದಿದ್ದರು. ಈ ವೇಳೆ ಮಕ್ಕಳು ನದಿಯಲ್ಲಿ ಸ್ನಾನ ಮಾಡೋದಾಗಿ ಹಠ ಹಿಡಿದಿದ್ದರಿಂದ ಸುಶೀಲ್ ನದಿ ದಡದಲ್ಲಿಯೇ ಕುಳಿತುಕೊಂಡಿದ್ದರು.

river death 2

ಪತ್ನಿ ಸೋನಿಯಾ ಮಕ್ಕಳನ್ನು ಕರೆದುಕೊಂಡು ನದಿಯಲ್ಲಿ ಇಳಿದಿದ್ದರು. ಮಕ್ಕಳು ನದಿ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಸೋನಿಯಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಸರೀತಾ ಸಹ ನದಿಯಲ್ಲಿ ಮುಳಗಲಾರಂಭಿಸಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಆರು ಜನ ಯುಮುನೆಯ ಪಾಲಾಗಿದ್ದಾರೆ. ಇನ್ನು ದಡದಲ್ಲಿ ಕುಳಿತಿದ್ದ ಸುಶೀಲ್ ಸಹಾಯಕ್ಕಾಗಿ ಕೂಗಿ ಕೂಗಿ ಜ್ಞಾನ ತಪ್ಪಿದ್ದಾರೆ.

river death

ಮಕ್ಕಳ ಧ್ವನಿ ಕೇಳಿದ್ದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಕುರಿಗಾಹಿ ನದಿಗೆ ಧುಮುಕಿದ್ರೂ ಯಾರನ್ನ ಉಳಿಸಲು ಸಾಧ್ಯವಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಹಲವು ಯುವಕರು ನದಿಗೆ ಧುಮುಕಿ ಆರು ಜನರಿಗಾಗಿ ಶೋಧ ನಡೆಸಿದ್ದಾರೆ. ಪೊಲೀಸರು ಸಹ ಘಟನಾ ಸ್ಥಳಕ್ಕೆ ಆಗಮಿಸಿ ಈಜು ತಜ್ಞರ ಮೂಲಕ ಹುಡುಕಾಟ ನಡೆಸಿದ್ದರು. ಬೆಳಗ್ಗೆ 11 ಗಂಟೆಗೆ ಘಟನಾ ಸ್ಥಳದಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಸೋನಿಯಾ, ಸರೀತಾ ಮತ್ತು ಬಾದಲ್ ಶವ ಪತ್ತೆಯಾಗಿದೆ. ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ನೀಡಲಾಗಿದೆ.

river death 4

ಡಿಸಿ ಧಮೇಂದ್ರ ಸಿಂಗ್, ಡಿಎಸ್‍ಪಿ ಪ್ರದೀಪ್ ಕುಮಾರ್, ಡಿಆರ್‍ಓ ಚಂದ್ರಮೋಹನ್, ತಹಶೀಲ್ದಾರ್ ನರೇಶ್ ಕೌಶಲ್ ಘಟನಾ ಸ್ಥಳದಲ್ಲಿದ್ದಾರೆ. ಬೋಟ್, ಮುಳುಗು ತಜ್ಞರ ಸಹಾಯದ ಮೂಲಕ ಉಳಿದವರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆ ಸುತ್ತಲಿನ ಗ್ರಾಮಗಳ ಈಜುಗಾರರು ಮತ್ತು ನಾವಿಕರನ್ನ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ನದಿ ದಡದಲ್ಲಿಯೇ ಗ್ರಾಮಸ್ಥರು ಬೀಡು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *