ಒಡವೆಗಾಗಿ ತಾಯಿ ಕೊಂದು, ಶವದ ಪಕ್ಕ ವಿಷದ ಬಾಟಲಿ ಇಟ್ಟು ಆತ್ಮಹತ್ಯೆ ನಾಟಕವಾಡಿದ ಮಕ್ಕಳು

Public TV
2 Min Read
HSN MURDER PKG 1

– ಕಿರಿಯ ಮಗ ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದಂತೆ ಸತ್ಯ ಬಯಲು
– ಪಾಪಿ ಮಕ್ಕಳನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸರು

ಹಾಸನ: ಒಡವೆಗಾಗಿ ಹೆತ್ತಮ್ಮನನ್ನೇ ಹೊಡೆದು ಕೊಂದಿದ್ದ ಪಾಪಿ ಮಕ್ಕಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಸಕಲೇಶಪುರ ತಾಲೂಕಿನ ಕರಡಿಗಾಲ ಗ್ರಾಮದ ತಂಗ್ಯಮ್ಮ(65) ಹೆತ್ತ ಮಕ್ಕಳಿಂದಲೇ ಕೊಲೆಯಾದ ನತದೃಷ್ಟ ತಾಯಿ. ಹಿರಿಯ ಮಗ ರಾಜೇಗೌಡ(48) ಹಾಗೂ ಎರಡನೇ ಮಗ ಸುಬ್ರಹ್ಮಣ್ಯ(45) ಸೇರಿ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಾರೆ.

hsn murder 2

ಐದಾರು ವರ್ಷಗಳ ಹಿಂದೆಯೇ ತನಗಿದ್ದ ಏಳು ಎಕರೆ ಜಮೀನನ್ನು ಮೂರು ಜನ ಗಂಡು ಮಕ್ಕಳಿಗೆ ಪಾಲುಮಾಡಿಕೊಟ್ಟಿದ್ದ ತಂಗ್ಯಮ್ಮ, ತಮಗಾಗಿ ಅರ್ಧ ಎಕರೆ ಜಮೀನು ಇಟ್ಟುಕೊಂಡು ಮುರುಕಲು ಮನೆಯಲ್ಲಿ ಬದುಕು ಸಾಗಿಸುತ್ತಿದ್ದರು. ಜೀವನಾಧಾರಕ್ಕಾಗಿ ಮೂರು ಎಮ್ಮೆ ಸಾಕಿಕೊಂಡು ಹೈನುಗಾರಿಕೆಯಿಂದ ಬರುವ ಹಣದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು.

hsn murder 6

ಆಸ್ತಿಯ ಜೊತೆ ಅಮ್ಮನ ಒಡವೆಯೂ ಬೇಕು ಎಂಬ ದುರಾಸೆಗೆ ಬಿದ್ದಿದ್ದು, ತುರ್ತು ಕೆಲಸಕ್ಕೆ ಬೇಕಾಗಿದೆ ಎಂದು ಅಮ್ಮನ ಒಡವೆ ಪಡೆದು ಗಿರವಿ ಇಟ್ಟುಕೊಂಡಿದ್ದಾರೆ. ಆದರೆ ಐದಾರು ತಿಂಗಳ ನಂತರ ನೆಂಟರ ಮನೆಗೆ ಹೋಗಿ ಬರಲು ಒಡವೆ ಇಲ್ಲ ಬಿಡಿಸಿ ಕೊಡಿ ಎಂದು ಕೇಳಿದ್ದಕ್ಕೆ ರಾಜೇಗೌಡ ಹಾಗೂ ಸುಬ್ರಹ್ಮಣ್ಯ ಗಲಾಟೆ ಮಾಡಿದ್ದರಂತೆ. ಮಾರ್ಚ್ 16ರಂದು ತಮ್ಮ ತೋಟದ ಸಮೀಪ ಎಮ್ಮೆಗಳಿಗೆ ಹುಲ್ಲು ತರೋಕೆ ಹೋಗಿದ್ದಾಗ ಅಲ್ಲಿಗೇ ಹೋಗಿದ್ದ ದುಷ್ಟ ಮಕ್ಕಳು ತಾಯಿಗೆ ಹೊಡೆದು ಕೊಂದಿದ್ದಾರೆ. ನಂತರ ಮೃತದೇಹದ ಪಕ್ಕದಲ್ಲಿ ವಿಷದ ಬಾಟಲಿ ಇಟ್ಟು ಅಮ್ಮ ವಿಷ ಕುಡಿದು ಸತ್ತಿದ್ದಾಳೆ ಎಂದು ಊರಿಗೆಲ್ಲಾ ಹೇಳಿ ಅಂತ್ಯ ಕ್ರಿಯೆಗೆ ಸಿದ್ಧತೆಯನ್ನೂ ಮಾಡಿದ್ದರು.

hsn murder 5

ಬೆಂಗಳೂರಿನಲ್ಲಿದ್ದ ಕಿರಿಯ ತಮ್ಮ ಹೇಮಂತ್ ಗೆ ಫೊನ್ ಮಾಡಿ ಅಮ್ಮ ಜಮೀನಿನ ಬಳಿ ಮೃತಪಟ್ಟಿದ್ದಾರೆ, ಬಾ ಎಂದು ಹೇಳಿದ್ದಾರೆ. ಅಂದೇ ಮಧ್ಯ ರಾತ್ರಿ ಬಂದ ಕಿರಿಯ ಮಗ, ಅಣ್ಣಂದಿರು ಹೇಳಿದ ಮಾತು ನಂಬಿದರೂ, ಅಮ್ಮನ ಕುತ್ತಿಗೆ ಭಾಗದಲ್ಲಿ ರಕ್ತದ ಕಲೆಗಳ ಗಾಯಗಳು ಅನುಮಾನ ಮೂಡಿಸಿದೆ. ಕೂಡಲೇ ಸಕಲೇಶಪುರ ಗ್ರಾಮಾಂತರ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿ ಬಂದ ಸಕಲೇಶಪುರ ಸಿಪಿಐ ಹಾಗೂ ಸಕಲೇಶಪುರ ಗ್ರಾಮಾಂತರ ಠಾಣೆ ಎಸ್‍ಐ ನೇತೃತ್ವದ ತಂಡ ಅಂತ್ಯಕ್ರಿಯೆ ಸ್ಥಗಿತ ಗೊಳಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಕಲೇಶಪುರಕ್ಕೆ ಸಾಗಿಸಿದ್ದಾರೆ.

hsn murder 3

ಈ ವೇಳೆ ಒಡವೆ ಹಾಗೂ ಹಣಕ್ಕಾಗಿ ಜಗಳ ತೆಗೆದು ತಾಯಿಯನ್ನು ಕೊಂದು ಆತ್ಮಹತ್ಯೆ ನಾಟಕ ಮಾಡಿದ್ದ ದುಷ್ಟರ ಕೃತ್ಯ ಬೆಳಕಿಗೆ ಬಂದಿದೆ. ದುರಾಸೆಯಿಂದ ಹೆತ್ತಮ್ಮನನ್ನೇ ಕೊಂದು ಇಬ್ಬರು ಮಕ್ಕಳು ಇದೀಗ ಜೈಲು ಪಾಲಾಗಿದ್ದಾರೆ.

Share This Article