ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಒಂದೇ ಹುದ್ದೆಯಿದ್ದರೂ ಇಬ್ಬರು ಉಪನೋಂದಣಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಈ ಹಿಂದೆ ದೊಡ್ಡಬಳ್ಳಾಪುರ ಸಬ್‍ರಿಜಿಸ್ಟರ್ ಕಛೇರಿಯಲ್ಲಿ ಉಪನೋಂದಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರಂಗರಾಜು ಅವರನ್ನು ಮೂರು ತಿಂಗಳ ಹಿಂದೆ ಸರ್ಕಾರ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಸತೀಶ್ ಅವರನ್ನು ನೇಮಕ ಮಾಡಿತ್ತು. ಹೀಗಾಗಿ ಉಪನೋಂದಣಾಧಿಕಾರಿಯಾಗಿ ಬಂದ ಸತೀಶ್ ಅವರು ಕೆಲಸ ಮಾಡುತ್ತಿದ್ದರು. ಆದರೆ ಅಧಿಕಾರದ ಅವಧಿಗೂ ಮುನ್ನವೇ ಸರ್ಕಾರ ನನ್ನನ್ನು ವರ್ಗಾವಣೆ ಮಾಡಿದೆ ಅಂತ ವರ್ಗಾವಣೆಯನ್ನು ವಿರೋಧಿಸಿದ ಸಬ್ ರಿಜಿಸ್ಟರ್ ರಂಗರಾಜು ವರ್ಗಾವಣೆ ಆದೇಶದ ವಿರುದ್ಧ ಕೆಎಟಿ ಮೊರೆ ಹೋಗಿದ್ದು, ವರ್ಗಾವಣೆಗೆ ಕೆಎಟಿ ತಡೆ ನೀಡಿದೆಯಂತೆ.
ಹೀಗಾಗಿ ಮತ್ತೆ ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ಕಚೇರಿಗೆ ವಾಪಸ್ ಬಂದ ರಂಗರಾಜು ಇದೀಗ ಮತ್ತದೇ ಹುದ್ದೆಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಗಾವಣೆ ಆದೇಶಕ್ಕೆ ಕೆಎಟಿನಿಂದ ತಡೆ ತಂದ ರಂಗರಾಜು ಮತ್ತದೆ ಸಬ್‍ರಿಜಿಸ್ಟರ್ ಹುದ್ದೆಯಲ್ಲಿ ಕುಳಿತಿದ್ದು, ಸರ್ಕಾರ ನೇಮಕ ಮಾಡಿದ್ದ ಸತೀಶ್‍ಗೆ ವಾಪಸ್ ಹೋಗುವಂತೆ ಹೇಳಿದ್ರಂತೆ. ಆದರೆ ಇದಕ್ಕೆ ಒಪ್ಪದ ಸತೀಶ್ ಸರ್ಕಾರ ನನ್ನನ್ನು ನೇಮಕ ಮಾಡಿದೆ. ಹಿರಿಯ ಅಧಿಕಾರಿಗಳು ಹೇಳುವವರೆಗೂ ನಾನು ಇಲ್ಲಿಂದ ಹೋಗಲ್ಲ ಅಂತ ಪಟ್ಟು ಹಿಡಿದು ಅದೇ ಕೊಠಡಿಯಲ್ಲಿ ಮತ್ತೊಂದು ಚೇರ್ ಹಾಕಿಕೊಂಡು ಕುಳಿತುಕೊಂಡಿದ್ದಾರೆ.
ಸತೀಶ್ ಸಹ ರಂಗರಾಜು ವರ್ಗಾವಣೆ ಆದೇಶಕ್ಕೆ ಕೆಎಟಿ ತಡೆ ನೀಡಿರುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಸ್ವಷ್ಟ ಆದೇಶ ನೀಡುವವರೆಗೂ ನಾನು ಇಲ್ಲೇ ಇರುತ್ತೇನೆ ಅಂತ ಪಟ್ಟು ಹಿಡಿದಿದ್ದಾರೆ. ಒಂದು ಕುರ್ಚಿಗೆ ಇಬ್ಬರು ಅಧಿಕಾರಿಗಳು ಕಿತ್ತಾಟವನ್ನು ಮುಂದುವರಿಸಿದ್ದಾರೆ.
ಕಳೆದ ಒಂದು ವಾರದಿಂದ ಒಂದೇ ಹುದ್ದೆಯಲ್ಲಿ ಇಬ್ಬರು ಅಧಿಕಾರಿಗಳು ಕೆಲಸ ಮಾಡ್ತಿದ್ದು, ಅಧಿಕೃತ ಅಧಿಕಾರಿ ಯಾರು ಅನ್ನೋದು ಸಿಬ್ಬಂದಿ ಸಾರ್ವಜನಿಕರಿಗೆ ಗೊಂದಲವಾಗಿದೆ. ಸರ್ಕಾರ ಅಥವಾ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆ ಹರಿಸುವ ಕೆಲಸ ಮಾಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.