ಶಿವಮೊಗ್ಗ: ಒಂದೇ ಗ್ರಾಮದ 26 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಗ್ರಾಮದಲ್ಲಿ ಆತಂಕ ಉಂಟಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭಗವತಿಕೆರೆಯಲ್ಲಿ ನಡೆದಿದೆ.
ಕಳೆದ ನಾಲ್ಕೈದು ದಿನದ ಹಿಂದೆ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಕಾಣಿಸಿಕೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೋಂಕಿತನ ಪತ್ನಿ ಹಾಗೂ ಪುತ್ರನನ್ನು ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಈ ಇಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಗ್ರಾಮದಲ್ಲಿ ಮೂರು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದಾರೆ. ಆರೋಗ್ಯ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದವರು ಹಾಗೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸುಮಾರು 76 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದ್ದರು. ಈ 76 ಮಂದಿಯಲ್ಲಿ ಇದೀಗ 26 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಪರೀಕ್ಷೆ ರದ್ದಿಗೆ ಪ್ರಧಾನಿ ಗುಮ್ಮ ಕಾರಣ, ಶಿಕ್ಷಣ ಸಚಿವರ ಐಲು ಪೈಲು ನಿರ್ಧಾರ- ಎಚ್‍ಡಿಕೆ ಕಿಡಿ
ಇದೀಗ ಗ್ರಾಮದಲ್ಲಿ ಒಂದೇ ವಾರದಲ್ಲಿ 32 ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಇದೀಗ ಸೋಂಕಿತರು ಎಲ್ಲರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ಪ್ರಮಾಣದಲ್ಲಿ ಒಂದೇ ಗ್ರಾಮದಲ್ಲಿ ಇಷ್ಟೊಂದು ಸೋಂಕು ಪತ್ತೆಯಾಗಲು ಗ್ರಾಮದಲ್ಲಿ ಕಳೆದ ವಾರ ನಡೆದಿದ್ದ ಅಂತರಘಟ್ಟಮ್ಮ ದೇವಿ ಜಾತ್ರೆಯೇ ಕಾರಣ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ: ಉಪೇಂದ್ರ
ಕೋವಿಡ್ ನಿಯಮಾವಳಿ ಮೀರಿ ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಮದಲ್ಲಿ ಜಾತ್ರೆಯ ಹೆಸರಿನಲ್ಲಿ ಬಾಡೂಟ ಆಯೋಜಿಸಲಾಗಿತ್ತು. ಬಾಡೂಟ ಸವಿಯಲು ಗ್ರಾಮಕ್ಕೆ ಬೇರೆ ಬೇರೆ ಕಡೆಯಿಂದ ಸಂಬಂಧಿಕರು ಆಗಮಿಸಿ ನಂತರ ವಾಪಸ್ ತೆರಳಿದ್ದರು. ಈ ಜಾತ್ರೆಯಾದ ಎರಡೇ ದಿನದಲ್ಲಿ ಗ್ರಾಮದ ಕೆಲವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂಬ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.