ಬೀಜಿಂಗ್: ಚೀನಾದ ಈಶಾನ್ಯದಲ್ಲಿರುವ ಟಿಯಾಂಜಿನ್ ಪ್ರದೇಶದಲ್ಲಿ ಐಸ್‍ಕ್ರೀಂನಲ್ಲಿ ಕೊರೊನಾ ಪತ್ತೆಯಾಗಿದೆ. ಇದರಿಂದಾಗಿ ಇದೀಗ ಐಸ್‍ಕ್ರೀಂ ತಿಂದವರಲ್ಲಿ ಆತಂಕ ಮನೆಮಾಡಿದೆ.
ಬೀಜಿಂಗ್‍ನ ಟಿಯಾಂಜಿನ್ ಪ್ರದೇಶದಲ್ಲಿರುವ ಡಕಿಯಾವಾಡು ಫುಡ್ ಕಂಪನಿಯು ತಯಾರು ಮಾಡಿದ್ದ ಐಸ್‍ಕ್ರೀಂ ಬಾಕ್ಸ್ ಗಳಲ್ಲಿ ಕೊರೊನಾ ಪತ್ತೆಯಾಗಿದೆ. ಕೂಡಲೇ ಸ್ಥಳೀಯಾಡಳಿತ ಅಧಿಕಾರಿಗಳು ಐಸ್‍ಕ್ರೀಂ ಕಂಪನಿಗೆ ಬೀಗ ಜಡಿದು, ಕಂಪನಿಯ ಎಲ್ಲಾ ಉದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. 1600 ಮಂದಿ ಉದ್ಯೋಗಿಗಳ ಪೈಕಿ 600 ಮಂದಿಯ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.
ಐಸ್‍ಕ್ರೀಂನಿಂದಾಗಿ ಕೊರೊನಾ ಬಂದಿರುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕಂಪನಿಯಲ್ಲಿ ತಯಾರಾಗಿರುವ 29 ಸಾವಿರ ಐಸ್‍ಕ್ರೀಂ ಬಾಕ್ಸ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ ಸ್ಥಳಿಯವಾಗಿ ಮಾರಾಟವಾಗಿರುವ 390 ಬಾಕ್ಸ್‍ಗಳನ್ನು ಟಿಯಾಂಜಿನ್‍ನಲ್ಲಿ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಸ್ಥಳೀಯಾಡಳಿತ ಮಾಹಿತಿ ನೀಡಿದೆ.
ಐಸ್‍ಕ್ರೀಂನಲ್ಲಿ ಕೊರೊನಾ ಮಾನವ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದೆ. ಇನ್ನು ಉತ್ಪಾದನಾ ಘಟಕದಲ್ಲಿನ ನೈರ್ಮಲ್ಯದ ಕೊರತೆಯಿಂದ ಬಂದಿರಲುಬಹುದು. ಐಸ್‍ಕ್ರೀಂನ್ನು ಹೆಚ್ಚಿನ ಶೀತ ತಾಪಮಾನದಲ್ಲಿ ಸಂಗ್ರಹಿಸುವ ಕಾರಣದಿಂದ ವೈರಸ್ ಅದರಲ್ಲಿ ಬದುಕುಳಿದು ನಂತರ ಹರಡಿರುವ ಬಗ್ಗೆ ಸಂಶಯ ಇದೆ ಎಂದು ವರದಿಯಾಗಿದೆ.
ಕಂಪನಿಯು ನ್ಯೂಜಿಲೆಂಡ್‍ನಿಂದ ಹಾಲಿನ ಪುಡಿ ಆಮದು ಮಾಡಿಕೊಂಡಿದೆ ಮತ್ತು ಉಕ್ರೇನ್‍ನಿಂದ ಕೆಲವು ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಐಸ್‍ಕ್ರೀಂ ತಯಾರಿಸಿದೆ ಎಂದು ಸರ್ಕಾರ ತಿಳಿಸಿದೆ.
ಚೀನಾದ ವುಹಾನ್‍ನಲ್ಲಿ 2019ರಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಮೀನು ಮತ್ತು ಇತರ ಆಹಾರ ಪದಾರ್ಥಗಳಿಂದ ಬಂದಿದೆ ಈ ಹಿಂದೆ ಚೀನಾ ಮಾಧ್ಯಮಗಳು ವರದಿ ಪ್ರಕಟಿಸಿತ್ತು.
ಹುಬೇ ಪ್ರಾಂತ್ಯದಲ್ಲಿ ಮತ್ತೆ 72 ಹೊಸ ಕೊರೊನಾ ಸೋಂಕು ಪತ್ತೆಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಸೋಂಕು ನಿಯಂತ್ರಣಕ್ಕಾಗಿ ಪ್ರತ್ಯೇಕ 9 ಸಾವಿರದ ಐನೂರು ಕೊಠಡಿಗಳನ್ನು ಹೊಂದಿರುವ ಆಸ್ಪತ್ರೆಯನ್ನು ನಿರ್ಮಿಸಿದೆ. ಚೀನಾದಲ್ಲಿ ಒಟ್ಟು 88,227 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 4,652 ಮಂದಿ ಮೃತಪಟ್ಟಿದ್ದಾರೆ.