ಗದಗ: ಕೊರೊನಾ ಮಧ್ಯೆಯೂ ಐಷಾರಾಮಿ ಸವಲತ್ತುಗಳನ್ನು ಬದಿಗೆ ತಳ್ಳಿ ಪತ್ನಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಮೂಲಕ ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಸರಳತೆ ಮೆರೆದಿದ್ದಾರೆ.
ನಗರದ ಕೆಸಿ ರಾಣಿ ರಸ್ತೆಯ ದುಂಡಪ್ಪ, ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಡಿಸಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.
ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವ ಜನರಿಗೆ ಸರ್ಕಾರಿ ವೈದ್ಯರ ಮೇಲೆ ನಂಬಿಕೆ ಇಟ್ಟು ತಮ್ಮ ಪತ್ನಿಗೆ ಹೆರಿಗೆ ಮಾಡಿಸಿದ ಡಿಸಿ ಇತರರಿಗೆ ಮಾದರಿಯಾಗಿದ್ದಾರೆ. ಸರಳತೆ ಮೆರೆದ ಡಿಸಿ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳ ಸಹವಾಸವೇ ಬೇಡ ಅನ್ನೋರು ಜಾಸ್ತಿ ಜನರಿದ್ದಾರೆ. ಆದರೆ ಸರ್ಕಾರಿ ವೈದ್ಯರ ಮೇಲಿನ ನಂಬಿಕೆಯಿಂದ ಡಿಸಿ ಒಳ್ಳೆಯ ನಿರ್ಧಾರಕ್ಕೆ ಬಂದಿದ್ದು, ವೈದ್ಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.