– ಕಾರ್ ಕಳ್ಳತನದಿಂದಲೇ ಬ್ಯಾಂಕಾಕ್‍ನಲ್ಲಿ ಹೋಟೆಲ್ ಖರೀದಿ
– 5 ಕೋಟಿ ಮೌಲ್ಯದ 50 ಕಾರು ವಶ
– 500ಕ್ಕೂ ಹೆಚ್ಚು ಕಾರು ಕದ್ದಿರುವ ಶಂಕೆ
ಲಕ್ನೋ: ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಸಿನಿಮಾ ನಟ ಸೇರಿ ಐವರನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದು, 5 ಕೋಟಿ ರೂ. ಮೌಲ್ಯದ 50 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ, “ಈವರೆಗೆ 5 ಜನರನ್ನು ಮಾತ್ರ ಬಂಧಿಸಲಾಗಿದೆ. ಮುಖ್ಯ ಆರೋಪಿ ನಾಸಿರ್ ಖಾನ್ ಅಲಿಯಾಸ್ ಚೋತಿ ಅಮಿನಾಬಾದ್ ಪ್ರದೇಶದ ನಿವಾಸಿಯಾಗಿದ್ದು, ಮೂರು ಭೋಜ್‍ಪುರಿ ಚಲನಚಿತ್ರಗಳಲ್ಲಿ ನಟಿಸಿದ್ದಾನೆ. ಈ ಪೈಕಿ ಒಂದು ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ” ಎಂದು ತಿಳಿಸಿದ್ದಾರೆ.
Advertisement
Advertisement
“ನಾಸಿರ್ ಕದ್ದ ಕಾರುಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುತ್ತಿದ್ದ. ಮತ್ತೋರ್ವ ಆರೋಪಿ ರಿಜ್ವಾನ್ (50) ಕಾರ್ ಕಳ್ಳತನದಿಂದ ಬಂದ ಹಣದಲ್ಲಿಯೇ ಬ್ಯಾಂಕಾಕ್‍ನಲ್ಲಿ ಹೋಟೆಲ್ ಖರೀದಿಸಿದ್ದಾನೆ. ಉಳಿದಂತೆ ಲಕ್ನೋ ಮೂಲದ ಆರೋಪಿ ಮೊಯಿನುದ್ದೀನ್ ಖಾನ್ ಮತ್ತು ವಿನಯ್ ತಲ್ವಾರ್, ಕಾನ್ಪುರದ ಶ್ಯಾಮ್ ಜಿ ಜೈಸ್ವಾಲ್ ಎಂದು ಗುರುತಿಸಲಾಗಿದೆ. ಈ ಎಲ್ಲ ಆರೋಪಿಗಳು ಹಳೆಯ ವಾಹನಗಳನ್ನು ಖರೀದಿಸಿ ಅದರ ಚಾಸಿಸ್ ಸಂಖ್ಯೆಯನ್ನು ಕದ್ದ ಕಾರುಗಳಿಗೆ ಬದಲಾಯಿಸುತ್ತಿದ್ದರು ಎಂದು ಸುಜಿತ್ ಪಾಂಡೆ ಹೇಳಿದ್ದಾರೆ.
Advertisement
ಕಾರು ಕಳ್ಳತನದ ದಂಧೆಯಲ್ಲಿರುವ ಇತರ ಎಂಟು ಆರೋಪಿಗಳು ಪರಾರಿಯಾಗಿದ್ದಾರೆ. ಅವರು ಮೀರತ್, ಆಗ್ರಾ, ಮೊರಾದಾಬಾದ್, ದೆಹಲಿ ಮತ್ತು ಲಖಿಂಪುರ ಖೇರಿಗೆ ಸೇರಿದವರಾಗಿದ್ದಾರೆ.
Advertisement
“ಗ್ಯಾಂಗ್ ಐಷಾರಾಮಿ ಕಾರುಗಳು ಸೇರಿದಂತೆ ಖಾಸಗಿ ವಿಮಾ ಕಂಪನಿಗಳಿಂದ ಸ್ಕ್ರ್ಯಾಪ್ ಮಾಡಿದ ವಾಹನಗಳನ್ನು ಖರೀದಿಯುತ್ತಿದ್ದರು. ನಂತರ ಉತ್ತರ ಪ್ರದೇಶ ಮತ್ತು ರಾಜ್ಯಗಳಲ್ಲಿ ಕಾರ್ ಕಳ್ಳರನ್ನು ಸಂಪರ್ಕಿಸುವ ಮೂಲಕ ಅದೇ ಮಾದರಿಯ ಕಾರುಗಳನ್ನು ಕದಿಯುತ್ತಿದ್ದರು. ಕಾರಿನ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಯನ್ನು ಸ್ಕ್ರ್ಯಾಪ್ ಮಾಡಿದ ಕಾರಿಗೆ ಹಾಕುತ್ತಿದ್ದರು” ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳು ವಿವಿಧ ರಾಜ್ಯಗಳಲ್ಲಿ ಜಾಲವನ್ನು ಹೊಂದಿದ್ದು, 500ಕ್ಕೂ ಕಾರು ಕದ್ದು ಮಾರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಲಕ್ನೋ ಪೊಲೀಸ್ ಆಯುಕ್ತ ಸುಜಿತ್ ಪಾಂಡೆ ತಿಳಿಸಿದ್ದಾರೆ.