ಮುಂಬೈ: ಯುಎಇಯಲ್ಲಿ ನಡೆದ 13 ನೇ ಆವೃತ್ತಿಯ ಐಪಿಎಲ್‍ನಲ್ಲಿ ಮಿಂಚು ಹರಿಸಿದ್ದ ನಾಲ್ಕು ಪ್ರಮುಖ ಆಟಗಾರರಿಗೆ ಈ ಬಾರಿ ರಾಷ್ಟ್ರೀಯ ತಂಡದ ಬಾಗಿಲು ತೆರೆದುಕೊಂಡಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ ಇದೇ ಮೊದಲ ಬಾರಿಗೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರಾಹುಲ್ ತೆವಾಟಿಯಾ ಹಾಗೂ ವರುಣ್ ಚಕ್ರವರ್ತಿ ಆಯ್ಕೆಯಾಗಿದ್ದಾರೆ.
ಈ ನಾಲ್ಕು ಜನ ಆಟಗಾರರೂ ದೇಶೀಯ ಕ್ರಿಕೆಟ್ ಹಾಗೂ ಹಿಂದಿನ ಆವೃತ್ತಿಯ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಂಬರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಭಾರತ ತಂಡ ಮತ್ತಷ್ಟೂ ಬಲಿಷ್ಟವಾಗಿ ಗೋಚರಿಸುತ್ತಿದೆ.
ಐಪಿಎಲ್ ಮತ್ತು ದೇಶಿಯ ಕ್ರಿಕೆಟ್‍ನಲ್ಲಿ ತನ್ನ ಹೊಡಿಬಡಿ ಆಟದಿಂದಾಗಿ ಹೆಚ್ಚು ಹೆಸರುವಾಸಿಯಾದವರು ಜಾರ್ಖಂಡ್ ನ ಇಶಾನ್ ಕಿಶನ್. ಕಳೆದ 13ನೇ ಆವೃತ್ತಿಯ ಐಪಿಎಲ್ ನಲ್ಲಿ 13 ಪಂದ್ಯಗಳನ್ನು ಆಡಿರುವ ಯುವ ಆಟಗಾರ 145.7ರ ಸ್ಟ್ರೈಕ್‍ರೇಟ್‍ನಲ್ಲಿ ಬ್ಯಾಟ್ ಬೀಸಿ 516 ರನ್ ಗಳಿಸಿದ್ದಾರೆ. ಹಾಗೆ ದೇಶಿ ಟೂರ್ನಿ ವಿಜಯ್ ಹಜಾರೆಯಲ್ಲಿ ಜಾರ್ಖಂಡ್ ತಂಡದ ನಾಯಕನಾಗಿ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ 19 ಬೌಂಡರಿ, 11 ಸಿಕ್ಸರ್ ಸಹಿತ 173 ರನ್(94 ಎಸೆತ) ಸಿಡಿಸಿ ಮಿಂಚಿದ್ದರು.
ಇಶಾನ್ ಕಿಶನ್‍ನಂತೆ ದೇಶಿ ಟೂರ್ನಿ ಮತ್ತು ಐಪಿಎಲ್‍ನಲ್ಲಿ ಮುಂಬೈ ಪರ ಬ್ಯಾಟ್ ಬೀಸುವ ಅನುಭವಿ ಆಟಗಾರ ಸೂರ್ಯಕುಮಾರ್ ಯಾದವ್ ಅವರಿಗೂ ಭಾರತ ತಂಡದಲ್ಲಿ ಆಡುವ ಅವಕಾಶ ಮೊದಲ ಬಾರಿಗೆ ಒಳಿದು ಬಂದಿದೆ. ಸೂರ್ಯಕುಮಾರ್ ಯಾದವ್ 13ನೇ ಆವೃತ್ತಿಯ ಐಪಿಎಲ್‍ನಲ್ಲಿ ಮುಂಬೈ ಪರ 15 ಪಂದ್ಯಗಳನ್ನು ಆಡಿ 145.01ರ ಸ್ಟ್ರೈಕ್‍ರೇಟ್‍ನಲ್ಲಿ 480 ರನ್ ಸಿಡಿಸಿ ಮುಂಬೈ 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಾಷ್ಟ್ರೀಯ ತಂಡಕ್ಕೆ ಮೊದಲ ಬಾರಿಗೆ ಹೆಜ್ಜೆ ಇಡುತ್ತಿರುವ ಇನ್ನೋರ್ವ ಹೊಡಿಬಡಿ ಆಟಗಾರ ಹರಿಯಾಣದ ಆಲ್‍ರೌಂಡರ್ ರಾಹುಲ್ ತೆವಾಟಿಯಾ. ಕಳೆದ ಬಾರಿಯ ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸ್ಫೋಟಕ ಆಟದಿಂದ ಭರವಸೆ ಮೂಡಿಸಿದ್ದ ಆಟಗಾರ. ಕಳೆದ ಬಾರಿ 14 ಪಂದ್ಯಗಳನ್ನು ಆಡಿ 139.34ರ ಸ್ಟ್ರೈಕ್‍ರೇಟ್‍ನಲ್ಲಿ ಬಿಗ್ ಶಾಟ್‍ಗಳನ್ನು ಹೊಡೆದು 255 ರನ್‍ಗಳೊಂದಿಗೆ ಬೌಲಿಂಗ್‍ನಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿ 46 ಓವರ್ ಎಸೆದು 10 ವಿಕೆಟ್ ಕಬಳಿಸಿ ಯಶಸ್ವಿ ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದರು.
ಮೇಲಿನ ಮೂವರಂತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿರುವ ಮತ್ತೊಬ್ಬ ಪ್ರತಿಭಾನ್ವಿತ ಆಟಗಾರ ತಮಿಳು ನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ. 13ನೇ ಸೀಸನ್ ಐಪಿಎಲ್‍ನಲ್ಲಿ ಕೋಲ್ಕತ್ತಾ ಪರ 13 ಪಂದ್ಯಗಳನ್ನು ಆಡಿ 52 ಓವರ್ ಎಸೆದು 6.84ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ 13 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದರು.
ಇದೀಗ 4 ಜನ ಐಪಿಎಲ್ ಹೀರೋಗಳಿಗೂ ರಾಷ್ಟ್ರೀಯ ತಂಡದಿಂದ ಕರೆಬಂದಿದ್ದು, ಮಾರ್ಚ್ 12ರಿಂದ ಆರಂಭವಾಗುವ ಟಿ20 ಸರಣಿಯಲ್ಲಿ ಟೀ ಇಂಡಿಯಾ ಪರ ಕಾಣಿಸಿಕೊಳ್ಳಲಿದ್ದಾರೆ.