ಮುಂಬೈ: ಕೊರೊನಾದಿಂದಾಗಿ ಮುಂದೂಡಲ್ಪಟ್ಟ 2021ರ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್‍ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನಲ್ಲಿ ನಡೆಸಲು ಈಗಾಗಲೇ ಬಿಸಿಸಿಐ ನಿರ್ಧರಿಸಿದೆ. ಇದರಂತೆ ಇದೀಗ ಸೆಪ್ಟೆಂಬರ್ 19ರಂದು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ ಸೆಣಸಾಡಲಿದೆ ಎಂದು ವರದಿಯಾಗಿದೆ.
14ನೇ ಆವೃತ್ತಿಯ ಐಪಿಎಲ್‍ನ 29 ಪಂದ್ಯಗಳು ನಡೆದ ಬಳಿಕ ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಮೇ 4ರಂದು ಐಪಿಎಲ್-2021 ಮುಂದೂಡಲಾಗಿತ್ತು. ಬಳಿಕ ಬಿಸಿಸಿಐ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಇನ್ನುಳಿದ 31 ಪಂದ್ಯಗಳನ್ನು ದುಬೈ, ಅಬುದಾಬಿ ಮತ್ತು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 19ಕ್ಕೆ ಪ್ರಾರಂಭಗೊಂಡು ಅಕ್ಟೋಬರ್ 15ಕ್ಕೆ ಫೈನಲ್ ಪಂದ್ಯ ನಡೆಸಲು ಪ್ಲಾನ್ ಮಾಡಿಕೊಂಡಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ
ಈಗಾಗಲೇ ಬಿಸಿಸಿಐ ಮೂಲಗಳು ತಿಳಿಸಿರುವ ಪ್ರಕಾರ ಐಪಿಎಲ್ ಸೆಕೆಂಡ್ ಇನ್ನಿಂಗ್ಸ್ ನ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಸಿಎಸ್‍ಕೆ ಮತ್ತು ರೋಹಿತ್ ಶರ್ಮಾ ಮುಂದಾಳತ್ವದ ಮುಂಬೈ ತಂಡಗಳು ಸೆಣಸಾಡಲಿದೆ ಎಂದು ವರದಿಯಾಗಿದೆ. ಈ ಸುದ್ದಿ ಹೊರ ಬರುತ್ತಿದ್ದಂತೆ ಕ್ರಿಕೆಟ್ ಪ್ರಿಯರು ಸಂತಸಗೊಂಡಿದ್ದಾರೆ.