ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಕನ್ನಡಿಗ ದೇವದತ್ ಪಡೀಕಲ್‍ಗೆ ಕೊರೊನಾ ದೃಢಪಟ್ಟಿದೆ.
ಐಪಿಎಲ್ ಆರಂಭಕ್ಕೆ ಇನ್ನು 5 ದಿನ ಬಾಕಿ ಇದ್ದು, ಈ ಟೂರ್ನಿ ಆರಂಭಕ್ಕೂ ಮೊದಲೇ ಆರ್ಸಿಬಿಗೆ ಹಿನ್ನಡೆ ಉಂಟಾಗಿದೆ. ಪಡೀಕಲ್‍ಗೆ ಕೊರೊನಾ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ತಂಗಿರುವ ಹೊಟೇಲ್‍ನಲ್ಲೇ ಐಸೋಲೇಶನ್‍ನಲ್ಲಿಡಲಾಗಿದೆ. ಈ ಮೊದಲು ಕೋಲ್ಕತ್ತಾ ತಂಡದ ಆಟಗಾರ ರೋಹಿತ್ ರಾಣಾ ಮತ್ತು ಡೆಲ್ಲಿ ತಂಡದ ಅಕ್ಷರ್ ಪಟೇಲ್ ಅವರಿಗೆ ಕೊರೊನಾ ದೃಢಪಟ್ಟಿತ್ತು.
ದೇವದತ್ ಪಡೀಕಲ್ ಕಳೆದ ಬಾರಿಯ ಐಪಿಎಲ್‍ನಲ್ಲಿ ಆರ್ಸಿಬಿ ಪರವಾಗಿ ಉತ್ತಮವಾಗಿ ಬ್ಯಾಟ್ ಬೀಸಿದ್ದು, 15 ಪಂದ್ಯಗಳಿಂದ 31.53 ಸರಾಸರಿಯಲ್ಲಿ 473 ರನ್ ಬಾರಿಸಿದ್ದರು. ಹಾಗೇ ಕೆಲದಿನಗಳ ಹಿಂದೆ ನಡೆದ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಿರುವ ಪಡೀಕಲ್ 218 ರನ್ ಮತ್ತು ವಿಜಯ್ ಹಜಾರೆ ಟೂರ್ನಿಯಲ್ಲಿ 737 ರನ್ ಸಿಡಿಸಿ ಭರ್ಜರಿ ಫಾರ್ಮ್‍ನಲ್ಲಿದ್ದರು. ಆದರೆ ಇದೀಗ ಕೊರೊನಾದಿಂದಾಗಿ ಮೊದಲೆರಡು ಪಂದ್ಯಗಳಿಂದ ಪಡಿಕಲ್ ಅವರನ್ನು ದೂರ ಇಡಲು ತಂಡ ಮುಂದಾಗಿದೆ.
ಆರ್ಸಿಬಿ ತಂಡ ತನ್ನ ಮೊದಲ ಪಂದ್ಯವನ್ನು ಎಪ್ರಿಲ್ 9 ರಂದು ಮುಂಬೈ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಎಪ್ರಿಲ್ 9 ರಿಂದ ಮೇ 30ರ ವರೆಗೆ ಒಟ್ಟು 6 ನಗರಗಳಲ್ಲಿ ಐಪಿಎಲ್ ಪಂದ್ಯಾಟಗಳನ್ನು ನಡೆಸಲು ಬಿಸಿಸಿಐ ಮುಂದಾಗಿದೆ.