– ಗಡಿ ಗ್ರಾಮ ಡೊಂಗರಾಂಪುರದಲ್ಲಿ ಟ್ಯಾಬ್ ವಿತರಣೆ
– ಕಟ್ಟಡವಿಲ್ಲ, ಶಿಕ್ಷಕರೂ ಇಲ್ಲದ ಪ್ರೌಢಶಾಲೆಗೆ ಟ್ಯಾಬ್ ಆಸರೆ
ರಾಯಚೂರು: ಪಬ್ಲಿಕ್ ಟಿವಿಯ ಮಹಾಯಜ್ಞ ಜ್ಞಾನದೀವಿಗೆ ಕಾರ್ಯಕ್ರಮ ಹಿನ್ನೆಲೆ ಜಿಲ್ಲೆಯ ಗಡಿ ಗ್ರಾಮ ಡೊಂಗರಾಂಪುರದಲ್ಲಿ ಇಂದು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಟ್ಯಾಬ್ ಗಳನ್ನ ವಿತರಿಸಲಾಯಿತು. ಇಲ್ಲಿನ ಸರ್ಕಾರಿ ಪ್ರೌಢಶಾಲೆಯ 31 ಮಕ್ಕಳಿಗೆ 15 ಟ್ಯಾಬ್‍ಗಳನ್ನ ನೀಡಲಾಯಿತು. ರೋಟರಿ ಇಂಟರ್ ನ್ಯಾಷನಲ್ ಸಹಯೋಗದೊಂದಿಗೆ ಪಬ್ಲಿಕ್ ಟಿವಿ ನಡೆಸಿರುವ ಮಹಾಯಜ್ಞದಿಂದ ಟ್ಯಾಬ್ ಗಳನ್ನ ಪಡೆದ ಗಡಿಭಾಗದ ಶಾಲೆಯ ಮಕ್ಕಳು ಖುಷಿ ವ್ಯಕ್ತಪಡಿಸಿದರು.
ಡೊಂಗರಾಂಪುರದಲ್ಲಿ ಪ್ರೌಢಶಾಲೆ ಆರಂಭವಾಗಿ ಮೂರು ವರ್ಷಗಳಾದರೂ ಶಿಕ್ಷಕರ ನೇಮಕಾತಿಯಾಗಿಲ್ಲ. ಇಲ್ಲಿನ ಮುಖ್ಯೋಪಾಧ್ಯಾಯ ಶರಣಬಸಪ್ಪ ನಿಲಗಲ್‍ಕಲ್ ಇಡೀ ಪ್ರೌಢಶಾಲೆಗೆ ಇರುವ ಏಕೈಕ ಶಿಕ್ಷಕ. ಪ್ರಾಥಮಿಕ ಶಾಲಾ ಕಟ್ಟಡದಲ್ಲೇ ಪ್ರೌಢಶಾಲೆ ನಡೆಯುತ್ತಿದ್ದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆಗಳು ಇವೆ. ಇಂತಹ ಸಂದರ್ಭದಲ್ಲಿ ಕೊರೊನಾ ಹಿನ್ನೆಲೆ ಶಾಲೆಗಳು ಬಂದ್ ಆಗಿದ್ದರಿಂದ ಪ್ರೌಢಶಾಲೆಯ ಸುಮಾರು 150 ವಿದ್ಯಾರ್ಥಿಗಳು ನಿಜಕ್ಕೂ ಕಂಗಾಲಾಗಿದ್ದರು. ಆನ್ ಲೈನ್ ಕ್ಲಾಸ್ ಹೇಳುವವರೂ ಇರಲಿಲ್ಲ, ಇನ್ನೂ ನೆಟ್ ವರ್ಕ್ ಸಮಸ್ಯೆಯಿಂದ ಏಕೋಪಧ್ಯಾಯರಿರುವ ಶಾಲೆಯ ಮಕ್ಕಳು ನಿಜಕ್ಕೂ ಶೈಕ್ಷಣಿಕವಾಗಿ ವಂಚಿತರಾಗಿದ್ದರು. ಈಗ ಪಬ್ಲಿಕ್ ಟಿವಿ ನೀಡಿರುವ ಟ್ಯಾಬ್ ಗಳೇ ನಮಗೆ ಶಿಕ್ಷಕರು, ಟ್ಯಾಬ್‍ಗಳನ್ನ ಸದ್ಬಳಕೆ ಮಾಡಿಕೊಂಡು ಪಾಠ ಕಲಿಯುತ್ತೇವೆ ಅಂತ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಅಚ್ಯುತ್ ರೆಡ್ಡಿ, ಪ್ರಭಾಕರ್ ರೆಡ್ಡಿ ಡೊಂಗರಾಂಪುರ ಸೇರಿ ಇತರರು ವಿದ್ಯಾರ್ಥಿಗಳಿಗೆ ಟ್ಯಾಬ್ ದಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಟ್ಯಾಬ್ ದಾನಿ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಶರಣಬಸಪ್ಪ ನಿಲಗಲಕರ್, ಸಿಆರ್ ಪಿ ಮೆಹಬೂಬ್, ರಾಯಚೂರು ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ವಿಜಯ್ ಮಹಾಂತೇಶ್, ರೋಟರಿ ಕ್ಲಬ್ ಸದಸ್ಯ ಶಿಕ್ಷಣ ಪ್ರೇಮಿ ಲಕ್ಷ್ಮಿಕಾಂತರೆಡ್ಡಿ ಬುರ್ದಿಪಾಡ, ಡೊಂಗರಾಂಪುರ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಮೈಲಪ್ಪ, ಶಿಕ್ಷಕ ಪ್ರೇಮನಾಥ್, ಎಸ್ ಡಿ ಎಂಸಿ ಅಧ್ಯಕ್ಷ ಮೌನೇಶ್ ಹಾಗೂ ಇತರರು ಭಾಗವಹಿಸಿದ್ದರು.