– ಇನ್ನೂ ವೆಂಟಿಲೇಟರ್ ನಲ್ಲೇ ಚಿಕಿತ್ಸೆ ಮುಂದುವರಿಕೆ
ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಸ್ವಲ್ಪ ಮಟ್ಟಿಗೆ ಕುಳಿತುಕೊಳ್ಳುವುದು ಹಾಗೂ ಸ್ವಲ್ಪ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ಆಪ್ಪನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್‍ನಲ್ಲೇ ಇದ್ದಾರೆ. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದ್ದು, ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ. ಇದೀಗ ಅವರು ಕುಳಿತುಕೊಳ್ಳುತ್ತಿದ್ದು, ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದು ಅವರಿಗೆ ಒಂದು ರೀತಿಯ ಸವಾಲಾಗಿದ್ದು, ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಅವರಿಗೆ ಶಕ್ತಿ ತುಂಬಿದೆ. ಎಂಜಿಎಂ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‍ಗಳ ತಂಡ ತುಂಬಾ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದೆ ಹಾಗೂ ನೋಡಿಕೊಳ್ಳುತ್ತಿದೆ. ನಮ್ಮ ತಂದೆಗೆ ಹಾಗೂ ಕುಟುಂಬಕ್ಕೆ ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.
View this post on Instagram
ಖುಷಿಯ ವಿಚಾರವೆಂದರೆ ನಿನ್ನೆಯಿಂದ ಆಹಾರ ಸೇವಿಸುತ್ತಿದ್ದು, ಇದು ಅವರಿಗೆ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ.
ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.