ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. ಎಂಟಿಬಿ ನಾಗರಾಜ್ ಅವರಿಗೆ ಅಬಕಾರಿ ಇಲಾಖೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ಸಂಬಂಧ ರೇಸ್ ಕೋರ್ಸ್ ರಸ್ತೆಯ ಅಪಾರ್ಟ್ ಮೆಂಟ್‍ನಲ್ಲಿ ಅಸಮಾಧಾನ ಇರುವವರ ಜೊತೆ ಸಭೆ ಸಚಿವ ಆರ್ ಅಶೋಕ್ ಸಭೆ ನಡೆಸಿದ್ದಾರೆ. ಈ ವೇಳೆ ಎಂಟಿಬಿ ಅವರು ಎಲ್ಲರಿಗೂ ಎಣ್ಣೆ ಕುಡಿಸಲು ನಾನು ಮಂತ್ರಿ ಆಗಬೇಕಾ ಎಂದು ಪ್ರಶ್ನಿಸುವ ಮೂಲಕ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂಬುದನ್ನು ಬಹಿರಂಗವಾಗಿ ಹೇಳಿದ್ದಾರೆ.
ಅಯ್ಯೋ. ನಾನು ಎಲ್ಲರಿಗೂ ಎಣ್ಣೆ ಕುಡಿಸೋ ಮಂತ್ರಿ ಆಗ್ಬೇಕಾ. ಎಲ್ಲರಿಗೂ ಕುಡಿಸೋದಕ್ಕೆ ನಾನು ಮಂತ್ರಿ ಸ್ಥಾನ ತ್ಯಾಗ ಮಾಡಬೇಕಿತ್ತಾ. ನನಗೆ ಆದಾಯ ಬರೋದು ಏನೂ ಬೇಕಿಲ್ಲ, ಎಣ್ಣೆ ಮಿನಿಸ್ಟರ್ ಆಗಲ್ಲ. ಅದರಿಂದ ನಮ್ಮ ಕುಟುಂಬ ಬೆಳೆಯೋದು ಬೇಡ. ನನ್ನ ಹತ್ರವೇ ಆದಾಯ ಬೇಕಾದಷ್ಟು ಇದೆ, ನನಗೆ ಎಣ್ಣೆ ಮಿನಿಸ್ಟರ್ ಬೇಡ. ಎಲ್ಲರಿಗೂ ಕುಡಿಸುವ ಪಾಪ ನಂಗೆ ಬೇಡಣ್ಣ ಎಂದು ಆರ್.ಅಶೋಕ್ ಎದುರು ಎಂಟಿಬಿ ನಾಗರಾಜ್ ಅಳಲು ತೋಡಿಕೊಂಡಿದ್ದಾರೆ.
ನನಗೆ ಅಬಕಾರಿ ಖಾತೆ ಇಷ್ಟವೇ ಇಲ್ಲ. ಅಬಕಾರಿ ತಗೊಂಡು ಏನ್ ಕೆಲಸ ಮಾಡೋದಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲಸವಿಲ್ಲದ ಖಾತೆಯನ್ನು ನನಗೆ ಕೊಟ್ಟಿದ್ದಾರೆ. ವಸತಿ ಖಾತೆಗೆ ರಾಜೀನಾಮೆ ಕೊಟ್ಟು ಬಂದಿದ್ದೆ. ಈಗ ಕೆಲಸವಿಲ್ಲದ ಖಾತೆ ತಗೊಂಡು ಏನ್ ಮಾಡ್ಲಿ ಎಂದು ಕಿಡಿಕಾರಿದ್ದಾರೆ.