ಉಡುಪಿ: ಎರಡು ವರ್ಷ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಯೂತ್ ಕಾಂಗ್ರೆಸ್‍ನ ಮುಂದಿನ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಫೈಟ್ ಬಗ್ಗೆ ಪ್ರತಿಕ್ರಿಯಿಸಿದರು. ಈ ವೇಳೆ ಎರಡು ವರ್ಷಗಳ ನಂತರ ಡಿಕೆಶಿ ಸಿಎಂ ಆಗುತ್ತಾರೆ. ಮುಂದೆ ಎರಡು ವರ್ಷಗಳಲ್ಲಿ ಚುನಾವಣೆ ಬರುತ್ತದೆ. ಕಾಂಗ್ರೆಸ್ ಗೆ ಮತ ಹಾಕಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದರು.
ಕಾಂಗ್ರೆಸ್ ನಲ್ಲಿ ಸದ್ಯ ಮುಖ್ಯಮಂತ್ರಿ ವಿಚಾರ ಸದ್ದು ಮಾಡುತ್ತಿರುವಾಗಲೇ ಡಿಕೆಶಿ ಪರ ಶಿಷ್ಯ ಬ್ಯಾಟಿಂಗ್ ಮಾಡಿದ್ದಾರೆ. ಹೈಕಮಾಂಡ್ ಸೂಚಿಸಿದರೂ ಮತ್ತೆ ಸಿಎಂ ವಿಚಾರ ಪ್ರಸ್ತಾಪ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಬಳಿಕ ಮೀನುಗಾರ ಮಹಿಳೆಯರೊಂದಿಗೆ ನಲಪಾಡ್ ಚರ್ಚೆ ನಡೆಸಿದರು. ಆಗ ಮೀನುಗಾರ ಮಹಿಳೆಯರು, ನೀವೆಲ್ಲ ರಾಜಕಾರಣಿಗಳು ಒಂದೇ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರಾವಳಿಯ ಮೂರು ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪ್ತವಾಸ ಮಾಡಿ ಉತ್ತರ ಕನ್ನಡಕ್ಕೆ ತೆರಳಿದ್ದಾರೆ. ಉಡುಪಿ ಪ್ರವಾಸದ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಈ ಸಂದರ್ಭ ಡಿ.ಕೆ ಶಿವಕುಮಾರ್ ಅವರಿಗೆ ಕಡ್ಸಲೆ ನೀಡಿ ಸನ್ಮಾನಿಸಲಾಯ್ತು. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಮತ್ತೆ ಶಾಕ್ ನೀಡಿದ ಹೈಕಮಾಂಡ್
ಈ ಸನ್ಮಾನ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಡಿಕೆಶಿಗೆ ಬೆಳ್ಳಿ ಕತ್ತಿ ನೀಡುವ ಬದಲು ದೈವಗಳಿಗೆ ಹರಕೆಯಾಗಿ ನೀಡುವ ಕಡ್ಸಲೆಯನ್ನು ನೀಡಲಾಗಿತ್ತು. ದೈವ ಪಾತ್ರಿ, ಭೂತಾರಾಧನೆ ಸಂದರ್ಭ ದೈವ ನರ್ತಕರು ಮಾತ್ರ ಕಡ್ಸಲೆ ಹಿಡಿದುಕೊಳ್ಳಲಾಗುತ್ತದೆ. ಧಾರ್ಮಿಕವಾಗಿ ಬಹಳ ಪವಿತ್ರವಾಗಿರುವ ಕಡ್ಸಲೆಯನ್ನು ಉಡುಗೊರೆಯಾಗಿ ನೀಡಿದ್ದು ಸರಿಯಲ್ಲ ಎಂದು ದೈವಾರಾಧಕರು ಭೂತರಾದನೆಯ ಮೇಲೆ ನಂಬಿಕೆ ಇರುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ: ಭಾವುಕರಾದ ನಾರಾಯಣಸ್ವಾಮಿ