– 4 ಸಾವಿರ ಸಾಲ ನೀಡಿ, 8,000 ವಾಪಸ್ ಕೊಡುವಂತೆ ಒತ್ತಾಯ
ಬೆಂಗಳೂರು: ಎರಡು ರಾತ್ರಿ ನನ್ನೊಂದಿಗೆ ಕಳೆದರೆ ತೆಗೆದುಕೊಂಡಿರುವ ಸಾಲವನ್ನು ಮನ್ನಾ ಮಾಡುವುದಾಗಿ ಏಜೆಂಟ್ ಓರ್ವ ಬ್ಯೂಟಿಷಿಯನ್‍ಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜೀವನ್ ಭೀಮಾನಗರ ನಿವಾಸಿ ಅಕ್ಷತಾಗೆ (ಹೆಸರು ಬದಲಾಯಿಸಲಾಗಿದೆ) ಸಾಲ ನೀಡಿದ್ದ ಏಜೆಂಟ್ ಓರ್ವ ಕಿರುಕುಳ ನೀಡಿದ್ದಾನೆ. ಅಕ್ಷತಾ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದು, ಆರ್ಥಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಲಾಕ್‍ಡೌನ್ ಜಾರಿಗೆ ಬರುವ ಮೊದಲು ಸಾಲವನ್ನು ತೆಗೆದುಕೊಂಡಿದ್ದರು. ಆದರೆ ಸಾಲವನ್ನು ಮರು ಪಾವತಿಸುವಂತೆ ಏಜೆಂಟರು ಆಕೆಗೆ ನಿರಂತರವಾಗಿ ಫೋನ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಬ್ಯೂಟಿಷಿಯನ್ ಏಜೆಂಟರ ಕಿರುಕುಳವನ್ನು ಸಹಿಸಲಾಗದೆ ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
Advertisement
ಬ್ಯೂಟಿಷಿಯನ್ ಜೀವನ್‍ಭೀಮಾನಗರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಬ್ಯೂಟಿಷಿಯನ್ ಆರೋಪಿಸಿದ್ದಾರೆ. ನನಗೆ ಬಂದಂತಹ ಮೆಸೇಜ್ ಮತ್ತು ಏಜೆಂಟರ ನಂಬರ್‌ಗಳನ್ನು ಸ್ಕ್ರೀನ್‍ಶಾಟ್ ತೆಗೆದು ಪೊಲೀಸರಿಗೆ ನೀಡಿದ್ದೇನೆ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ. ಮೇಲ್ ಮಾಡುವ ಮೂಲಕ ನಾನು ಪೊಲೀಸರಿಗೆ ದೂರು ಕಳುಹಿಸಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ನಾನು ಮಾರ್ಚ್ ತಿಂಗಳಲ್ಲಿ ಆಸ್ಪತ್ರೆಗಾಗಿ 4,000 ರೂ. ಸಾಲ ಪಡೆದುಕೊಂಡಿದ್ದೆ. ಸಾಲವನ್ನು ಮರುಪಾವತಿಸಲು ನನಗೆ 15 ದಿನಗಳ ಕಾಲ ಸಮಯ ನೀಡಿದ್ದರು. ಆದರೆ ನಾನು ಕೆಲಸವನ್ನು ಕಳೆದುಕೊಂಡಿದ್ದರಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲ. ಆಗ ನನಗೆ ಇನ್ನೂ ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿಕೊಂಡೆ. ಆದರೆ ಅವರು ಸಾಲ ಹಿಂದಿರುಗಿಸಲು ವಿಳಂಬ ಮಾಡಿದ್ದಕ್ಕೆ ದಂಡವನ್ನು ಸೇರಿಸಲು ಪ್ರಾರಂಭಿಸಿದರು. ಅದು ಏಪ್ರಿಲ್ ಅಂತ್ಯದ ವೇಳೆಗೆ 8,000 ಆಗಿತ್ತು. ನನಗೆ ಯಾವುದೇ ಕೆಲಸವಿಲ್ಲದ ಕಾರಣ ಹಣ ವಾಪಸ್ ನೀಡಲು ಸಾಧ್ಯವಾಗಿಲ್ಲ ಎಂದು ಬ್ಯೂಟಿಷಿಯನ್ ಹೇಳಿದ್ದಾರೆ.
ಏಜೆಂಟ್ ಓರ್ವ ನನಗೆ ನಿರಂತರವಾಗಿ ಮೆಸೇಜ್ ಕಳುಹಿಸುತ್ತಿದ್ದನು. ಒಂದು ವೇಳೆ ನಾನು ಹಣ ಮರುಪಾವತಿ ಮಾಡದಿದ್ದರೆ ಸಾರ್ವಜನಿಕವಾಗಿ ಅವಮಾನಿಸುವುದಾಗಿ ಬೆದರಿಕೆ ಹಾಕಿದನು. ಕೊನೆಗೆ ನಾನು ಹೇಗೋ ಸ್ವಲ್ಪ ಹಣವನ್ನು ಹೊಂದಿಸಿ ಸಾಲ ತೀರಿಸಿದೆ. ಆದರೂ ಏಜೆಂಟ್ ಎರಡು ರಾತ್ರಿ ನನ್ನೊಂದಿಗೆ ಕಳೆಯಲು ಒಪ್ಪಿದರೆ ಉಳಿದ ಬಾಕಿ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದನು. ಅಲ್ಲದೇ ನನ್ನೊಂದಿಗೆ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಬ್ಯೂಟಿಷಿಯನ್ ಹೇಳಿಕೊಂಡಿದ್ದಾರೆ.
ನಾನು ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೊಲೀಸರು ಆ ನಂಬರಿಗೆ ಫೋನ್ ಮಾಡಿದರೆ ಕನೆಕ್ಟ್ ಆಗುತ್ತಿಲ್ಲ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.