– ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ರೈತ
ಧಾರವಾಡ: ಕಳೆದ ಜೂನ್ 29 ರಂದು ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ತುಪ್ರಿಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ರೈತನ ಕುಟುಂಬಕ್ಕೆ ಎರಡು ತಿಂಗಳ ಬಳಿಕ ಜಿಲ್ಲಾಡಳಿತ ಪರಿಹಾರ ನೀಡಿದೆ.
ಜೂನ್ 29 ರಂದು ಧಾರವಾಡ ತಾಲೂಕಿನ ಹಾರೊಬೆಳವಡಿ ನಿವಾಸಿ ರೈತ ಮಡಿವಾಳಪ್ಪ ಜಕ್ಕಪ್ಪನವರ್ (40) ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗಿದ್ದ. ನಂತರ ಆತನ ಹುಡುಕಾಟ ನಡೆಸಿದರೂ ಆತ ಸಿಕ್ಕಿರಲಿಲ್ಲ. ಇದರಿಂದ ಆತನ ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುವಂತಾಗಿತ್ತು.
Advertisement
Advertisement
ದನ ಮೇಯಿಸಲು ಹೋಗಿ ರೈತ ತುಪ್ರಿಹಳ್ಳದ ಸೆಳೆತದಿಂದ ಕೊಚ್ಚಿ ಹೋಗಿದ್ದ. ಬಳಿಕ ಜಿಲ್ಲಾಡಳಿತ ಹುಡುಕುವ ಕಾರ್ಯಾಚರಣೆ ನಡೆಸಿತ್ತು. 6 ದಿನಗಳ ಕಾಲ ಹಳ್ಳದಲ್ಲಿ ಕಾರ್ಯಾಚರಣೆ ನಡೆಸಿದ ನಂತರ ಶವ ಸಿಗಲಿಲ್ಲ ಎಂದು ಹೇಳಿ ಜಿಲ್ಲಾಡಳಿತ ಕೈ ತೊಳೆದುಕೊಂಡಿತ್ತು. ಇದರಿಂದ ಮಾಡಿವಾಳಪ್ಪರ ಕುಟುಂಬ ಆತಂಕಗೊಂಡಿತ್ತು. 6 ದಿನ ಕಾರ್ಯಾಚರಣೆ ನಡೆಸಿದ ಬಳಿಕ ಜಿಲ್ಲಾಡಳಿತದ ಯಾವುದೇ ಅಧಿಕಾರಿ ರೈತನ ಮನೆಯತ್ತ ಸುಳಿದಿರಲಿಲ್ಲ. ಪರಿಹಾರದ ಮಾತುಗಳನ್ನು ಆಡಿರಲಿಲ್ಲ. ಇದರಿಂದ ಮಗನನ್ನು ಕಳೆದುಕೊಂಡ ವೃದ್ಧ ದಂಪತಿ ಪರಿತಪಿಸುವಂತಾಗಿತ್ತು.
Advertisement
ನೊಂದ ಕುಟುಂಬದವರನ್ನೂ ಭೇಟಿಯಾಗದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿತ್ತು. ರೈತರ ಹೆಸರಿನಲ್ಲಿ ಪ್ರಮಾಣ ಮಾಡಿದ ಸರ್ಕಾರ ಇವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿತ್ತು.
Advertisement
ಇಷ್ಟೆಲ್ಲ ಆಗಿ, ಪ್ರಕರಣ ನಡೆದು 2 ತಿಂಗಳು ಕಳೆದ ಬಳಿಕ ಜಿಲ್ಲಾಡಳಿತ ಸರ್ಕಾರದ ಪರವಾಗಿ ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ರೈತನ ಕುಟುಂಬಕ್ಕೆ ತೆರಳಿ ಚೆಕ್ ವಿತರಿಸಿದರು.