ಎಎಪಿ ಕಚೇರಿ ಕಟ್ಟಡದ ಮಾಲೀಕರಿಗೆ ಅರವಿಂದ ಲಿಂಬಾವಳಿ ಬೆದರಿಕೆ ಆರೋಪ!

Public TV
2 Min Read
aap

ಬೆಂಗಳೂರು: ಆಮ್ ಆದ್ಮಿ ಪಾರ್ಟಿಯು ಭ್ರಷ್ಟ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದು, ನಮಗೆ ಕಚೇರಿ ತೆರೆಯಲು ಅವಕಾಶ ನೀಡಿದ ಕಟ್ಟಡದ ಮಾಲೀಕರಿಗೆ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಬೆದರಿಕೆ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದು ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ, ಮಹದೇವಪುರ ವಿಧಾನಸಭಾ ಕ್ಷೇತ್ರದ ಎಎಪಿ ಅಧ್ಯಕ್ಷರಾದ ಅಶೋಕ್ ಮೃತ್ಯುಂಜಯರವರು ಕಸವನಹಳ್ಳಿ ವೃತ್ತದಲ್ಲಿ ಕಟ್ಟಡವೊಂದನ್ನು ಲೀಸ್‍ಗೆ ಪಡೆದು, ಅಲ್ಲಿ ಬೆಳ್ಳಂದೂರು ವಾರ್ಡ್ ಕಚೇರಿಯನ್ನು ಭಾನುವಾರ ಆರಂಭಿಸಿದ್ದರು. ವಿಷಯ ತಿಳಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿಯವರು ಕಚೇರಿಗೆ ಕಟ್ಟಡವನ್ನು ಬಾಡಿಗೆ ನೀಡಿದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ. ಕಚೇರಿಯನ್ನು ಖಾಲಿ ಮಾಡಿಸದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷವೊಂದು ಕಚೇರಿ ತೆರೆಯುವುದನ್ನೂ ಸಹಿಸಲಾರದಷ್ಟು ಅರವಿಂದ್ ಲಿಂಬಾವಳಿ ಹತಾಶರಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ARAVINDHA LIMBAVALI medium

ಜನರ ಕಲ್ಯಾಣವೊಂದೇ ಆಮ್ ಆದ್ಮಿ ಪಾರ್ಟಿಯ ಆಶಯವಾಗಿದೆ. ದ್ವೇಷ ರಾಜಕಾರಣದಲ್ಲಿ ನಾವು ಆಸಕ್ತಿ ಹೊಂದಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಬಿಜೆಪಿಯವರು ಭಾವಿಸಬಾರದು. ಗೂಂಡಾಗಿರಿಯು ಬಿಜೆಪಿಯ ಸಂಸ್ಕೃತಿಯಾಗಿದ್ದು, ಶಾಸಕರು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ. ಲಿಂಬಾವಳಿಯವರ ಪ್ರಜಾಪ್ರಭುತ್ವ ವಿರೋಧಿ ನಡೆಗೆ ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ತಕ್ಕ ಪಾಠ ಕಲಿಸುವುದು ನಮಗೆ ತಿಳಿದಿದೆ ಎಂದು ಮೋಹನ್ ದಾಸರಿ ಹೇಳಿದರು.

Arvind Limbavali Kolar medium

ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂರವರು ಮಾತನಾಡಿ, ಕ್ಷೇತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೆರೆ ಒತ್ತುವರಿ ವಿರುದ್ಧ ಎಎಪಿ ದನಿ ಎತ್ತಿತ್ತು. ಇದರಿಂದ ಕಂಗೆಟ್ಟಿರುವ ಶಾಸಕ ಲಿಂಬಾವಳಿಯವರು ತಮ್ಮ ಇನ್ನಷ್ಟು ಅಕ್ರಮ ಬಯಲಾಗಬಹುದು ಎಂಬ ಭಯದಿಂದ ಬೆದರಿಕೆ ಹಾಕಿದ್ದಾರೆ. ಅವರ ಗೂಂಡಾಗಿರಿ ಮುಂದುವರಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಕಚೇರಿ ಆರಂಭಿಸುವುದು ಪ್ರಜಾಪ್ರಭುತ್ವ ನಮಗೆ ನೀಡಿರುವ ಹಕ್ಕಾಗಿದ್ದು, ಈ ಹಕ್ಕನ್ನು ಕಿತ್ತುಕೊಳ್ಳುವ ದುಸ್ಸಾಹಸದಿಂದ ಲಿಂಬಾವಳಿಯವರು ಹಿಂದೆ ಸರಿಯಬೇಕು ಎಂದು ಕಿಡಿಕಾರಿದರು.

limbavali

ಶಾಸಕ ಅರವಿಂದ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು ರಿಪಬ್ಲಿಕ್ ಆಫ್ ಮಹದೇವಪುರ ಮಾಡಲು ಹೊರಟಿದ್ದಾರೆ. ಅಧಿಕಾರದ ಮದದಿಂದ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಬೇರೆ ಪಕ್ಷಗಳ ಏಳಿಗೆಯನ್ನು ಹತ್ತಿಕ್ಕಲು ಯಾವ ಮಟ್ಟಕ್ಕಾದರೂ ಇಳಿಯುವ ಹಂತ ತಲುಪಿದ್ದಾರೆ. ಎಎಪಿಯ ಕಚೇರಿಯ ಆರಂಭಕ್ಕೆ ಅಡ್ಡಗಾಲು ಹಾಕುವ ಬದಲು, ತಾಕತ್ತಿದ್ದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮನ್ನು ಎದುರಿಸಲಿ ಎಂದು ಜಗದೀಶ್ ವಿ. ಸದಂ ಸವಾಲು ಹಾಕಿದರು.

Share This Article
Leave a Comment

Leave a Reply

Your email address will not be published. Required fields are marked *