ಬಾಗಲಕೋಟೆ: ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಡಾಟಾ ಎಂಟ್ರಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದಲ್ಲಿ ನಡೆದಿದೆ.
ಅನ್ನಪೂರ್ಣ ಪಾದಗಟ್ಟಿ ಎಂಬ ಮಹಿಳಾ ಸಿಬ್ಬಂದಿ ಮೃತ ದುರ್ದೈವಿ. ಸ್ಥಳೀಯರ ಕಿರುಕುಳಕ್ಕೆ ಬೇಸತ್ತಿದ್ದ ಅನ್ನಪೂರ್ಣ, ಗ್ರಾಮ ಪಂಚಾಯತಿ ಅಭಿವೃದ್ಧಿ ಕಾರ್ಯಗಳಲ್ಲಿ ಭ್ರಷ್ಟಾಚಾರ ಎಸಗಿದ್ದಾರೆಂದು ಊರಿನವರು ಆರೋಪಿಸಿ, ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಇದರಿಂದ ಅನ್ನಪೂರ್ಣ ಬೇಸತ್ತು ಹೋಗಿದ್ದರು. ಇತ್ತ ಸ್ಥಳೀಯರ ದೂರಿನ ಆಧಾರದ ಮೇಲೆ ಪರಿಶೀಲನೆಗೆ ಬಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಧಿಕಾರಿಯ ಮುಂದೆಯೇ ಅನ್ನಪೂರ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎರಡು ವರ್ಷಗಳಿಂದ ಮೇಲಾಧಿಕಾರಿ ಹಾಗೂ ಸ್ಥಳೀಯ ಮುಖಂಡರು ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಮಹಿಳಾ ಸಿಬ್ಬಂದಿ ಮನನೊಂದು ಆತ್ಮಹತ್ಯಗೆ ಯತ್ನಿಸಿದ್ದಾರೆ. ಸೋಮವಾರ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನನ್ವಯ ಹಳದೂರು ಗ್ರಾಮಪಂಚಾಯತಿಗೆ ಪರಿಶೀಲಿಸಲು ಬಂದಿದ್ದ ಅಧಿಕಾರಿಯ ಮುಂದೆ, ಕಿರುಕುಳದ ಬಗ್ಗೆ ಮಾಹಿತಿ ನೀಡಿ ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಳಿಕ ತಕ್ಷಣವೇ ಅವರನ್ನು ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಹಿಳೆ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತ ಮಹಿಳೆಯ ಸಂಬಂಧಿಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ಆಸ್ಪತ್ರೆ ಎದುರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಅನ್ನಪೂರ್ಣ ಶವವನ್ನ ನಿನ್ನೆ ಮಧ್ಯರಾತ್ರಿವರೆಗೂ ಆಸ್ಪತ್ರೆಯಲ್ಲಿ ಬಿಟ್ಟು, ಅವಳ ಸಾವಿಗೆ ಕಾರಣರಾದಾವರನ್ನು ಬಂಧಿಸುವಂತೆ ಆಸ್ಪತ್ರೆಯ ಎದುರು ಮೃತ ಅನ್ನಪೂರ್ಣ ಮನೆಯವರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಧರಣಿ ನಡೆಸಿದ್ದಾರೆ.
ನಂತರ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಮನೆಯವರು ಅನ್ನಪೂರ್ಣ ಶವ ತಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಈ ಕುರಿತು ಗುಳೆದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರೈ ಸೀಮಂತ