ಹುಬ್ಬಳ್ಳಿ: ಮಗಳ ಸಾಧನೆ ನೋಡಲು ಬಂದಿದ್ದ ತಾಯಿ, ಮಗಳೇ ಪೂಜಾ ಊರಿಗೆ ಹೋಗಿ ಬರೋಣ ಬಾ ಎಂದು ಕರೆದಾಗ ತಮ್ಮ ಊರಿಗೆ ಹೋಗಿದ್ರೆ ಸಾವು ಸನಿಹವೇ ಸುಳಿಯುತ್ತಿರಲಿಲ್ಲ. ಎಲ್ಲರೊಂದಿಗೆ ಲವಲವಿಕೆಯಿಂದ ಇರುತ್ತಿದ್ದ ಪೂಜಾ ಭಟ್ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಈ ಸಂಗತಿಯನ್ನು ಸಹಪಾಠಿಗಳಿಗೆ ಹಾಗೂ ತಾಯಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಕಿಮ್ಸ್ ನಲ್ಲಿ ಎಂಬಿಬಿಎಸ್ ಹಾಗೂ ಹೌಸ್ ಸರ್ಜನ್ ಆಗಿ ಕೆಲಸ ಮಾಡಿದ್ದ ಡಾ. ಪೂಜಾ ಭಟ್ ಬುಧವಾರ ನಿಧನ ಹೊಂದಿದ್ದು, ಸಹಪಾಠಿಗಳು, ಪ್ರಾಧ್ಯಾಪಕ ವರ್ಗದವರಿಗೆ ಅತೀವ ನೋವನ್ನುಂಟು ಮಾಡಿದೆ. ಘಟಿಕೋತ್ಸವದಲ್ಲಿ ಪೂಜಾ ಭಟ್ ಪ್ರಮಾಣ ಪತ್ರಗಳನ್ನು ಪಡೆದಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಅವರ ತಾಯಿ, `ಊರಿಗೆ ಹೋಗೋಣ?’ ಎಂದು ಹೇಳಿದ್ದರು. ಆದರೆ, `ಗೆಳೆಯರೆಲ್ಲ ಸೇರಿ ಪ್ರವಾಸ ಮಾಡಿ ಬರುತ್ತೇವೆ. ಆ ಮೇಲೆ ಊರಿಗೆ ಹೋಗೋಣ’ ಎಂದು ಪೂಜಾ ಹೇಳಿದ್ದರು. ಅವತ್ತು ತಾಯಿ ಜೊತೆ ಊರಿಗೆ ಹೋಗಿದ್ದರೆ ಸಾವು ಹತ್ತಿರ ಬರುತ್ತಿರಲಿಲ್ಲ ಎಂದು ಪೂಜಾ ಅವರ ಸಹಪಾಠಿ ಹಾಗೂ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.
Advertisement
Advertisement
ಕಾಸರಗೋಡು ಮೂಲದ ಡಾ. ಪೂಜಾ ತಂದೆ ಹಿಂದೆಯೇ ತೀರಿಕೊಂಡಿದ್ದು, ತಾಯಿಗೆ ಇವರು ಒಬ್ಬರೇ ಮಗಳು. ಕರುಳ ಕುಡಿಯನ್ನು ಕಳೆದುಕೊಂಡಿರುವ ಪೂಜಾ ತಾಯಿ ಈಗ ಒಬ್ಬಂಟಿಯಾಗಿದ್ದಾರೆ. ಮಗಳಿಂದಲೇ ಎಲ್ಲ ನೋವನ್ನು ಮರೆತಿದ್ದ ತಾಯಿ ಈಗ ಮಗಳು ಇಲ್ಲದೇ ಅನಾಥವಾಗಿದ್ದಾರೆ.
Advertisement
Advertisement
ಗಂಭೀರವಾಗಿ ಗಾಯಗೊಂಡು 8 ದಿನಗಳಿಂದ ಪ್ರಜ್ಞೆಯಿಲ್ಲದೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಡಾ. ಪೂಜಾ ಅವರೊಂದಿಗೆ ತಾಯಿ ಇದ್ದರು. ಮಗಳು ತಡವಾಗಿಯಾದರೂ ಗುಣವಾಗಲಿ, ಆದರೆ, ಸ್ವಲ್ಪವಾದರೂ ಮಾತಾಡಲಿ ಎಂದು ತಾಯಿ ಕಾಯುತ್ತಿದ್ದರು. ಆದರೆ ವಿಧಿಯಾಟ ಮಗಳನ್ನು ಸಾವಿನ ಮನೆಗೆ ಕರೆದೊಯ್ದಿದೆ. ಬದುಕಿನಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದ ತಾಯಿ ಹೃದಯಕ್ಕೆ ಮತ್ತೊಂದು ಆಘಾತ ಉಂಟಾಗಿದ್ದು, ಮಗಳ ಸಾವಿನಿಂದ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾರವಾರ ಮತ್ತು ಗೋವಾ ಪ್ರವಾಸಕ್ಕೆ ಹೊರಟಿದ್ದ ವೇಳೆ ಫೆ. 2ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಾ. ಪೂಜಾ ತೀವ್ರವಾಗಿ ಗಾಯಗೊಂಡಿದ್ದರು. ಕಿಮ್ಸ್ ವೈದ್ಯರು ಅವರನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಕಿಮ್ಸ್ ಆವರಣದಲ್ಲಿ ಡಾ. ಪೂಜಾ ಪಾರ್ಥಿವ ಶರೀರವಿಟ್ಟು ಅಂತಿಮ ನಮನ ಸಲ್ಲಿಸಲಾಯಿತು. ನಂತರ ಕೇಶ್ವಾಪುರದ ಶವಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.