– ಇಬ್ಬರು ಮಾತ್ರ ಪ್ರಯಾಣಿಸಲು ಅವಕಾಶ
– ಚಾಲಕರು ವಾಹನ ಸ್ಯಾನಿಟೈಸ್ ಮಾಡುವುದು ಕಡ್ಡಾಯ
– ಚಾಲಕ ಮಾಸ್ಕ್ ಧರಿಸದಿದ್ದಲ್ಲಿ ಟ್ರಿಪ್ ಕ್ಯಾನ್ಸಲ್‍ಗೆ ಅವಕಾಶ
ನವದೆಹಲಿ: ಆ್ಯಪ್ ಆಧರಿತ ಕ್ಯಾಬ್ ಸಂಸ್ಥೆ ಊಬರ್ ಕೊರೊನಾ ಪ್ರೂಫ್ ರೈಡಿಂಗ್‍ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದ್ದು, ಈ ಕುರಿತು ತನ್ನ ಎಲ್ಲ ಗ್ರಾಹಕರಿಗೆ ಮಾಹಿತಿ ನೀಡಿದೆ.
ಭಾರತದಲ್ಲಿ ‘ಊಬರ್ ಪೂಲ್’ ಅಂದರೆ ಶೇರ್ ರೈಡಿಂಗ್ ಆಯ್ಕೆಯನ್ನು ತೆಗೆದುಹಾಕಲಾಗಿದ್ದು, ಮುಂದಿನ ಆದೇಶದ ವರೆಗೆ ಶೇರ್ ರೈಡಿಂಗ್ ಇರುವುದಿಲ್ಲ. ಒಂದು ಕಾರ್‍ನಲ್ಲಿ ಇಬ್ಬರು ಮಾತ್ರ ಒಟ್ಟಿಗೆ ಪ್ರಯಾಣಿಸಬಹುದಾಗಿದೆ. ಚಾಲಕನ ಪಕ್ಕ ಅಂದರೆ ಮುಂಭಾಗದ ಸೀಟ್‍ನಲ್ಲಿ ಕೂರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಕ್ಯಾಬ್ ಚಾಲಕ ಮಾಸ್ಕ್ ಧರಿಸದಿದ್ದಲ್ಲಿ ಟ್ರಿಪ್ ಕ್ಯಾನ್ಸಲ್ ಮಾಡಬಹುದಾಗಿದೆ ಎಂದು ಸಂಸ್ಥೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಕಾರ್‍ನಲ್ಲಿ ಎಸಿ ಬಳಸಲು ಸಹ ಕಡಿವಾಣ ಹಾಕಿದ್ದು, ಫ್ರೆಶ್ ಏರ್ ಮೋಡ್‍ನಲ್ಲಿ ಮಾತ್ರ ಎಸಿ ಬಳಸಬಹುದಾಗಿದೆ. ಬ್ಯಾಗ್‍ಗಳಿಗೆ ಪ್ರಯಾಣಿಕರೇ ಜವಾಬ್ದಾರರು, ಅವರೇ ನಿರ್ವಹಿಸಬೇಕು ಎಂದಿದೆ.
ಇದಿಷ್ಟು ಪ್ರಯಾಣಿಕರಿಗೆ ವಿಧಿಸಿದ ನಿರ್ಬಂಧಗಳಾಗಿದ್ದರೆ, ಚಾಲಕರು ಹಾಗೂ ಪಾರ್ಟನರ್‍ಗಳಿಗೆ ಪ್ರತ್ಯೇಕ ನಿಯಮ ರೂಪಿಸಿದೆ. ಮೂರು ಹಂತದ ಚೆಕ್‍ಲಿಸ್ಟ್ ನೀಡಿದೆ. ಚಾಲಕರು ಕಡ್ಡಾಯವಾಗಿ ಕೋವಿಡ್ ಹಬ್ ಆ್ಯಪ್ ಬಳಸಬೇಕು. ಇದಕ್ಕಾಗಿ ಚಾಲಕರಿಗೆ ತರಬೇತಿ ನೀಡಲಾಗುವುದು. ಈ ವೇಳೆ ಮಾಸ್ಕ್ ಹೇಗೆ ಧರಿಸಬೇಕು, ಅಲ್ಲದೆ ತಮ್ಮ ಕಾರ್ಡ್‍ನ್ನು ಹೇಗೆ ಸೋಂಕು ಮುಕ್ತವಾಗಿರಿಸಿಕೊಳ್ಳಬೇಕು ಎಂದು ತಿಳಿಸಲಾಗುತ್ತದೆ.
ಪ್ರತಿ ರೈಡ್ ಸಂದರ್ಭದಲ್ಲಿಯೂ ಚಾಲಕರು ಮಾಸ್ಕ್ ಧರಿಸಿದ ಫೋಟೋ ಕ್ಲಿಕ್ಕಿಸಿಕೊಂಡು ಅಪ್‍ಲೋಡ್ ಮಾಡಬೇಕು. ಇದನ್ನು ಪಾಲಿಸದಿದ್ದಲ್ಲಿ ಟ್ರಿಪ್ ಪ್ರಾರಂಭವಾಗುವುದಿಲ್ಲ. ಅಲ್ಲದೆ ಮಾಸ್ಕ್ ಧರಿಸಿದ ಫೋಟೋ ಅಪ್‍ಲೋಡ್ ಮಾಡದಿದ್ದಲ್ಲಿ ಚಾಲಕರಿಗೆ ಲಾಗಿನ್ ಆಗಲು ಅವಕಾಶ ಇರುವುದಿಲ್ಲ. ಚಾಲಕ ಮಾಸ್ಕ್ ಧರಿಸಿಲ್ಲವಾದಲ್ಲಿ ಪ್ರಯಾಣಿಕರು ಸಹ ಟ್ರಿಪ್ ಕ್ಯಾನ್ಸಲ್ ಮಾಡಬಹುದಾಗಿದೆ.
ಪ್ರತಿ ಟ್ರಿಪ್ ಪ್ರಾರಂಭವಾಗುವುದಕ್ಕೂ ಮುನ್ನ ಚಾಲಕರು ತಮ್ಮ ವಾಹನವನ್ನು ಸ್ಯಾನಟೈಸ್ ಮಾಡಬೇಕು. ವಿಶೇಷವಾಗಿ ಪ್ರಯಾಣಿಕರು ಹೆಚ್ಚು ಬಳಸುವ ಸ್ಥಳದಲ್ಲಿ ಸ್ಯಾನಿಟೈಸ್ ಮಾಡಬೇಕು. ಸೀಟ್, ಬಾಗಿಲಿನ ಹಿಡಿಕೆ ಹಾಗೂ ಕಿಟಗಿ ಗಾಜಿನ ಬಟನ್‍ಗಳನ್ನು ಸ್ಯಾನಿಟೈಸ್ ಮಾಡಬೇಕು.
ಪ್ರತಿ ಚಾಲಕ ಆರೋಗ್ಯ ಸೇತು ಆ್ಯಪ್ ಹೊಂದುವುದು ಕಡ್ಡಾಯವಾಗಿದೆ. ಇದೆಲ್ಲದರ ಜೊತೆಗೆ ಕೊರೊನಾ ಕುರಿತು ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುವುದಾಗಿ ತಿಳಿಸಿದೆ.