ಗದಗ: ಕೊರೊನಾ ಶಂಕಿತ ವ್ಯಕ್ತಿಯೋರ್ವ ನಡುರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವ ದೃಶ್ಯ ಗದಗ ನಗರದ ಬೆಟಗೇರಿ ಭಾಗದಲ್ಲಿ ಕಂಡು ಬಂದಿದೆ.
ನಡುರಸ್ತೆಯಲ್ಲಿ ನರಳಾಡಿದ ವ್ಯಕ್ತಿ ನಗರದ ಕುರಹಟ್ಟಿಪೆಟೆ ನಿವಾಸಿ ಎನ್ನಲಾಗಿದೆ. ಗಂಟಲು ನೋವು, ಹೊಟ್ಟೆ ಉರಿ, ಎದೆ ಉರಿ ಎಂದು ಎದೆ ಬಡಿದುಕೊಂಡು ನರಳಾಡುತ್ತಿದ್ದರೂ ಯಾರು ಮುಟ್ಟಿಲ್ಲ. ಕೂಡಲೇ 108 ವಾಹನಕ್ಕೆ ಫೋನ್ ಮಾಡಿದರೂ ವಾಹನ ಬರಲಿಲ್ಲ. ಒಂದು ಗಂಟೆ ತಡವಾಗಿ ಬಂದಿದ್ದಕ್ಕೆ ಸ್ಥಳೀಯರು ಅಂಬುಲೆನ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಕೊರೊನಾ ಇರಬಹುದು ಎಂದು ತಿಳಿದು ಯುವಕನನ ಬಳಿ ಹೋಗಲು ಯಾರೂ ಮುಂದಾಗಿಲ್ಲ. ಅವನ ಸಂಕಷ್ಟದ ಕೂಗು ಕೇಳಲಾಗದೇ ಓರ್ವ ವ್ಯಕ್ತಿ ಸಹಾಯಕ್ಕೆ ಮುಂದಾಗಿದ್ದಾನೆ. ನೀರು ಕುಡಿಸಿ ಸಮಾಧಾನ ಮಾಡಿದ್ದಾನೆ. 108 ಅಂಬುಲೆನ್ಸ್ ತಡವಾಗಿದ್ದಕ್ಕೆ ಅವನೇ ಹೊತ್ತುಕೊಂಡು ಆಸ್ಪತ್ರೆಗೆ ಹೋಗಲು ಮುಂದಾಗಿದ್ದು, ಅಷ್ಟರಲ್ಲಿ ಅಂಬುಲೆನ್ಸ್ ಬಂದ ಹಿನ್ನೆಲೆ ವಾಹನದ ಮೂಲಕ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
Advertisement
ಎಲ್ಲರೂ ನಿಂತು ನೋಡುವ ಸಂದರ್ಭದಲ್ಲಿ ಓರ್ವ ಯುವಕ ಏನನ್ನು ಯೋಚಿಸದೇ ಅವನ ಸಹಾಯಕ್ಕೆ ಬಂದು ಜೀವ ಉಳಿಸಲು ಮುಂದಾಗಿರುವುದು ನಿಜಕ್ಕೂ ಮೆಚ್ಚಲೇಬೇಕಾದ ವಿಚಾರವಾಗಿದೆ. ನಡುರಸ್ತೆಯಲ್ಲಿ ನರಳಾಡುತ್ತಿದ್ದ ವ್ಯಕ್ತಿ ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕನನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ವರದಿಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕಾಯುತ್ತಿದೆ.