– ಉಪಚುನಾವಣೆಯಲ್ಲಿ ವಿಜಯೇಂದ್ರ ದುಡ್ಡು ಹೊಡೆದ
ಹಾಸನ: ಮಸ್ಕಿ ಮತ್ತು ಬಸವಕಲ್ಯಾಣ ಉಪಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಹಾಕದೆ ಜೆಡಿಎಸ್ ಸೋಲೊಪ್ಪಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಜಿ.ಮಂಗಳಾಪುರ ಗ್ರಾಮದಲ್ಲಿ ನಡೆದ ತಮ್ಮ ಬೆಂಬಲಿಗ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಅವರ ತಮ್ಮನ ಮಗನ ಬೀಗರೌತಣ ಕಾರ್ಯಕ್ರಮಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೂ ಮುನ್ನವೇ ಜೆಡಿಎಸ್‍ನವರು ಸೋಲೊಪ್ಪಿಕೊಂಡಿದ್ದಾರೆ. ಆದ್ದರಿಂದ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದರು.
ಶಿರಾ ಹಾಗೂ ಆರ್.ಆರ್ ನಗರ ಉಪ ಚುನಾವಣೆಯಲ್ಲಿ ಸೋಲಿಗೆ ನಾನು ಸೇರಿದಂತೆ ಎಲ್ಲರೂ ಹೊಣೆಗಾರರು. ನಾನು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಬೈ ಎಲೆಕ್ಷನ್ ಗೆದ್ದಿದ್ದೆ. ಆದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೋಟಿಗಟ್ಟಲೆ ದುಡ್ಡು ಹೊಡೆದು ಬೈ ಎಲೆಕ್ಷನ್ ಗೆಲ್ಲುತ್ತಿದ್ದಾರೆ. ಜೆಡಿಎಸ್ ವೀಕ್ ಆಗಿರೋದ್ರಿಂದ ಅವರ ಮತಗಳು ಬಿಜೆಪಿಗೆ ಬರುತ್ತಿದೆ. ಹೀಗಾಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಗೆಲುವು ಸುಲಭವಾಗಿದೆ ಎಂದರು.
ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗುವ ವಿಚಾರ ಚರ್ಚೆಯಲ್ಲಿದೆ. ಎಂ.ಬಿ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ ಬಳಿಕ ಸರ್ವಾನುಮತದಿಂದ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಯನ್ನು ಕಾಂಗ್ರೆಸ್ಸಿನವರು ಕರೆದುಕೊಂಡು ಹೋಗಿದ್ದಾರೆ ಎಂದು ಸಿಎಂ ಪುತ್ರ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಾಪ್ ಗೌಡ 2013ರಲ್ಲಿ ಯಾರ ಕ್ಯಾಂಡಿಡೇಟ್ ಆಗಿದ್ದರು ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ, ಆಪರೇಷನ್ ಕಮಲ ಮಾಡಿದ್ದು ಬಿಜೆಪಿಯ ವಿಜಯೇಂದ್ರ. ಅವರು ಈಗ ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಹೇಳಿದರು.
ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಿಗಮ-ಮಂಡಳಿಗೆ ನಮ್ಮದೇನೂ ಅಭ್ಯಂತರವಿಲ್ಲ. ವೀರಶೈವ-ಲಿಂಗಾಯತ ನಿಗಮ ಮಂಡಳಿಗೆ ಹಣ ನೀಡಲಿ. ಆದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರು ಸಾಕಷ್ಟು ಮಂದಿ ಇದ್ದಾರೆ ಅವರಿಗೂ ಸರ್ಕಾರ ನೆರವು ನೀಡಬೇಕು. ಈಡಿಗರು-ತಿಗಳ ಜನಾಂಗಕ್ಕೆ ಸರ್ಕಾರ ನೆರವು ನೀಡಲು ಮುಂದೆ ಬಂದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.
ಪ್ರಧಾನಿ ಮೋದಿಯವರು ಕೋವಿಡ್ ವ್ಯಾಕ್ಸಿನೇಷನ್ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ. ಆದರೆ ಕೋವಿಡ್ ವ್ಯಾಕ್ಸಿನ್ ಶೇಖರಣೆಗೆ ಅಗತ್ಯವಾದ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಔಷಧಿ ಶೇಖರಣೆಗೆ ಮೈನಸ್ 70 ಡಿಗ್ರಿಯಲ್ಲಿ ತರಬೇಕು. ಕೊರೊನಾ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದ್ದು, ಮೋದಿ ಭಾಷಣ ಕೇವಲ ಚಪ್ಪಾಳೆ ತಟ್ಟೋಕೆ ಹಾಗೂ ಜಾಗಟೆ ಬಾರಿಸಿ ಸೀಮಿತ ಎಂದು ಲೇವಡಿ ಮಾಡಿದರು.