ಉಡುಪಿ: ರಾಜ್ಯದ್ಯಂತ ಮಠ-ಮಂದಿರ ತೆರೆದು ದೇವರ ದರ್ಶನಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ವಿಶ್ವಪ್ರಸಿದ್ಧ ಉಡುಪಿ ಶ್ರೀ ಕೃಷ್ಣನ ದರ್ಶನ ಸಿಗಲು ಇನ್ನೊಂದು ವಾರ ಕಾಯಬೇಕಾಗಿದೆ.
Advertisement
ಮಹಾಮಾರಿ ಕೊರೊನಾದ ಆರ್ಭಟ ಕಡಿಮೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಲಾಕ್ ಡೌನ್ ಇನ್ನಷ್ಟು ಸಡಿಲ ಮಾಡಿದೆ. ಸೋಮವಾರದಿಂದ ದೇವಸ್ಥಾನ ಮಠ ಮಂದಿರ ಮಸೀದಿ ಯ ಬಾಗಿಲು ಓಪನ್ ಮಾಡಲು ಅವಕಾಶ ಕೊಟ್ಟಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನ ಸಿಗಲಿದೆ. ಉಡುಪಿಯ ಅಷ್ಟ ಮಠಗಳಿಗೆ ಒಳಪಟ್ಟ ಉಡುಪಿ ಕೃಷ್ಣಮಠ ಓಪನ್ ಆಗಲು ಇನ್ನೂ ಏಳು ದಿನ ಇದೆ.
Advertisement
Advertisement
ಒಂಬತ್ತು ಮಠಗಳು ಎರಡು ದೇವಸ್ಥಾನ ಇರುವ ರಥಬೀದಿ ಸಾರ್ವಜನಿಕರು ಭಕ್ತರು ಇಲ್ಲದೆ ಬಿಕೋ ಅನ್ನುತ್ತಿದೆ. ಕಳೆದ ಎರಡು ವರ್ಷಗಳಿಂದ ಕೃಷ್ಣಮಠಕ್ಕೆ ಸಂಬಂಧಪಟ್ಟಂತೆ ಯಾವುದೇ ದೊಡ್ಡ ಉತ್ಸವ ನಡೆದಿಲ್ಲ. ಪ್ರವಾಸಿಗರನ್ನೇ ನಂಬಿರುವ ಅಂಗಡಿಗಳು ವ್ಯಾಪಾರವಿಲ್ಲದೆ ಬಡವಾಗಿವೆ. ಧಾರ್ಮಿಕ ಪ್ರವಾಸಿಗರನ್ನು ನಂಬಿರುವ ವ್ಯಾಪಾರಿಗಳು ದಿಕ್ಕೆಟ್ಟಿದ್ದಾರೆ.
Advertisement
ರಥಬೀದಿಯಲ್ಲಿ ಓಡಾಡುವ ಜನ ಮಠದ ಹೊರಗೆ ನಿಂತು ಶ್ರೀಕೃಷ್ಣನಿಗೆ ಕೈಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮಠದ ಸಿಬ್ಬಂದಿ ಪರ್ಯಾಯ ಅದಮಾರು ಮಠದವರು ದೈನಂದಿನ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಡಳಿತ ಮಂಡಳಿ, ಗೋಶಾಲೆಯ ಸಿಬ್ಬಂದಿ, ಅಡುಗೆಯವರು ಮಾತ್ರ ಕಳೆದ ಇಪ್ಪತ್ತು ದಿನಗಳಲ್ಲಿ ಮಠದ ಒಳಗೆ ಇದ್ದಾರೆ. ಸುತ್ತಮುತ್ತಲಿನ ವಾತಾವರಣ ನೋಡಿಕೊಂಡು, ಹೊರ ರಾಜ್ಯಗಳ ಚಿತ್ರಣವನ್ನು ಗಮನಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡುತ್ತೇವೆ ಎಂದು ಪರ್ಯಾಯ ಅದಮಾರು ಮಠ ಹೇಳಿದೆ. ವಿಶ್ವಕ್ಕೆ ಅಂಟಿರುವ ವ್ಯಾದಿ ಶೀಘ್ರ ಉಪಶಮನವಾಗಲಿ ಎಂದು ಪ್ರಾರ್ಥನೆ ಮಾಡುವುದಾಗಿ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.