ಬೆಂಗಳೂರು: ಬಾಬ್ರಿ ಮಸೀದಿಯ ಹೋರಾಟದಲ್ಲಿ ನಾನು ಸಹ ಭಾಗವಹಿಸಿದ್ದೆ, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬಂದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದು ಸಿಬಿಐ ನ್ಯಾಯಾಲಯ ಐತಿಹಾಸಿಕ ತೀರ್ಪು ಕೊಟ್ಟಿದೆ. 32 ನಾಯಕರನ್ನು ನಿರ್ದೋಷಿ ಎಂದು ತೀರ್ಪು ಬಂದಿದೆ. ಇದರಿಂದ ಸತ್ಯಕ್ಕೆ ಜಯ ಸಿಕ್ಕಿದೆ. ಈ ಹೋರಾಟದಲ್ಲಿ ನಾನೂ ಸಹ ಭಾಗವಹಿಸಿದ್ದೆ ಎಂದು ಸಂತಸ ವ್ಯಕ್ತಪಡಿಸಿದರು.
Advertisement
Advertisement
ನನಗೂ ಈ ತೀರ್ಪು ವೈಯಕ್ತಿಕವಾಗಿ ಸಂತಸ ತಂದಿದೆ. ಹಿರಿಯ ನಾಯಕ ಅಡ್ವಾಣಿಯವರ ಯಶಸ್ವಿ ಹೋರಾಟದಿಂದ ಅಯೋಧ್ಯೆಯಲ್ಲಿ ಇಂದು ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನ ತೀರ್ಪು ಏನಾಗುತ್ತೆ ಎಂದು ಬಹಳ ಕಾತುರದಿಂದ ಕಾಯುತ್ತಿದ್ದರು. ಇವತ್ತು ಭಾರತೀಯರೆಲ್ಲರೂ ಸಂತೋಷ ಪಡುವ ದಿನ. ಹೋರಾಟಗಾರರಿಗೆ ಗೆಲುವು ಯಾವತ್ತೂ ಶತಸಿದ್ಧ ಅನ್ನೋದಕ್ಕೆ ಇದು ತಾಜಾ ಉದಾಹರಣೆ. ಈ ಯಶಸ್ಸಿಗೆ ಅಡ್ವಾಣಿ, ಜೋಷಿ, ಉಮಾಭಾರತಿಯಂತವರು ಕಾರಣ ಎಂದರು.
Advertisement
Advertisement
1992 ಡಿಸೆಂಬರ್ 6ರಂದು ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 351 ಸಾಕ್ಷಿಗಳನ್ನು ಹಾಗೂ 600 ದಾಖಲೆ ಪ್ರತಿಗಳನ್ನು ವಿಶೇಷ ನ್ಯಾಯಾಲಯಕ್ಕೆ ನೀಡಿತ್ತು. ಆರಂಭಿಕವಾಗಿ 48 ಮಂದಿಯನ್ನು ಆರೋಪಿಗಳೆಂದು ಸಿಬಿಐ ಚಾರ್ಜ್‍ಶೀಟ್ ಸಲ್ಲಿಸಿತ್ತು. ಆದರೆ ಮೂರು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಕಾರಣ 48 ಜನ ಆರೋಪಿಗಳ ಪೈಕಿ 16 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 32 ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿತ್ತು. ಈಗ ಈ ಪ್ರಕರಣದಲ್ಲಿದ್ದ ಎಲ್ಲ ಆರೋಪಿಗಳು ಖುಲಾಸೆಯಾಗಿದ್ದಾರೆ.