– ಚಿತ್ರರಂಗದ ದೊಡ್ಡವರ ಮಕ್ಕಳು ಡ್ರಗ್ಸ್ ದಂಧೆಯಲ್ಲಿ ಭಾಗಿ
– ಪೊಲೀಸರು ಕೇಳಿದರೆ ಹೆಸರನ್ನು ಬಹಿರಂಗ ಪಡಿಸುವೆ
ಬೆಂಗಳೂರು: ಮೂರನೇ ಪೀಳಿಗೆಯ ಮತ್ತು ಇತ್ತೀಚಿಗೆ ಬಂದ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿತ್ತು. ಎಲ್ಲಿ ಎಲ್ಲಿ ಯಾವ ಯಾವ ತೋಟದಲ್ಲಿ, ರೆಸಾರ್ಟಿನಲ್ಲಿ ಮತ್ತು ರಾಜಕಾರಣಿಗಳ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಎಲ್ಲ ಗೊತ್ತಿತ್ತು ಎಂದು ನಟ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು, ಹಿರಿಯ ನಟರು ಮತ್ತು ನಿರ್ಮಾಪಕರ ಈ ವಿಚಾರದ ಬಗ್ಗೆ ಮಾತನಾಡಿ ಶಾಕ್ ಆಗಿದ್ದು ಉಂಟು. ಇದರ ಬಗ್ಗೆ ಹಿರಿಯ ನಟರಾದ ನನ್ನ ಸ್ನೇಹಿತರು ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಇವತ್ತು ಮೀಡಿಯಾ ಮುಂದೆ ಬರಲು ಕಾರಣ ಸುದ್ದಿವಾಹಿನಿಯಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ಮಾಫಿಯಾದಲ್ಲಿ ಇದೆ ಎಂದು ತೋರಿಸುತ್ತಿರುವುದು ನನಗೆ ನೋವಾಗಿದೆ ಎಂದರು.
Advertisement
Advertisement
ಇದರಲ್ಲಿ ಪೂರ್ತಿ ಚಿತ್ರರಂಗವಿಲ್ಲ. ಇದರಲಿಲ್ಲ ಮೂರನೇ ಪೀಳಿಗೆಯ ನಟ-ನಟಿಯರು, ಹಿರಿಯ ನಿರ್ದೇಶಕರ ಮಕ್ಕಳು, ಹಿರಿಯ ನಟರ ಮಕ್ಕಳು ಮತ್ತು ರಾಜಕಾರಣಿಗಳ ಮಕ್ಕಳು ದುಡ್ಡು ಇರುವವರು ಭಾಗಿಯಾಗಿದ್ದಾರೆ. ದೊಡ್ಡ ದೊಡ್ಡ ಶ್ರೀಮಂತರು ಬೆನ್ಜ್, ಜಾಗ್ವಾರ್ ಕಾರಿನಲ್ಲಿ ಹುಡುಗಿಯರನ್ನು ಕರೆತಂದು ಈ ರೀತಿ ಮಾಡುತ್ತಿದ್ದಾರೆ. ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿಲ್ಲ. ಇದನ್ನು ಮೀಡಿಯಾ ತೋರಿಸಬೇಕು. ಇತ್ತೀಚೆಗೆ ಖ್ಯಾತಿ ಪಡೆದ ನಟಿಯರು, ಈಗ ಬೆಳೆಯುತ್ತಿರುವ ಕೆಲ ನಟಿಯರು ಪಾರ್ಟಿಯಲ್ಲಿ ಮಾತ್ರವಲ್ಲದೇ ಶೂಟಿಂಗ್ ಸಮಯದಲ್ಲೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
Advertisement
Advertisement
ಬಾಲಿವುಡ್ ಮಾದರಿಯಲ್ಲಿ ಇಲ್ಲೂ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಪ್ರಚಾರ, ಮೋಜು, ನಶೆಗಾಗಿ ಮತ್ತು ಸಿನಿಮಾ ಅವಕಾಶಕ್ಕಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಹನಿಟ್ಯ್ರಾಪ್ ಕೂಡ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರು ಕಮಿಷನರ್ ಕೂಡ ಇದರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೆಲ ನಟಿಯರು ಏಕಾಏಕಿ ರಾತ್ರೋ ರಾತ್ರಿ ಜಾಗ್ವಾರ್ ಕಾರು, ಮನೆ ಎಲ್ಲವನ್ನು ಖರೀದಿಸಿದ್ದಾರೆ ಎಂದು ಹೇಳಿದ್ದರು. ಆದರೆ ಅವರ ಹೆಸರು ಹೇಳಲಿಲ್ಲ. ಅವರಿಗೆ ಅವರ ಹೆಸರು ಗೊತ್ತಿದೆ. ತನಿಖೆ ಆಗಿದೆ ಆದರೆ ಬಹಿರಂಗಪಡಿಸಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ ಎಂದು ಲಂಕೇಶ್ ದೂರಿದ್ದಾರೆ.
ಒಂದು, ಎರಡು ಸಿನಿಮಾ ಮಾಡಿದ ನಟಿಯರು, ಹಿರಿಯ ನಟರ ಮಕ್ಕಳ ಜೊತೆ, ರಾಜಕಾರಣಿಗಳ ಮಕ್ಕಳ ಜೊತೆ ಪಾರ್ಟಿ ಮಾಡುತ್ತಾರೆ. ಇದರಿಂದ ಅವರ ಆರೋಗ್ಯಕ್ಕೂ ತೊಂದರೆಯಿದೆ. ಈ ಹಿಂದೆ ಕೂಡ ಒಬ್ಬ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೇಯೇ ಆಗಲಿಲ್ಲ. ಯಾಕೇ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಈ ಹಿಂದಿನಿಂದಲೂ ರೇವ್ ಪಾರ್ಟಿಗಳು ನಡೆಯುತ್ತಿವೆ. ಅದಕ್ಕೆ ತನಿಖೆಯಾಗಬೇಕು ಎಂದು ಹೇಳುತ್ತಿದ್ದೇನೆ ಎಂದರು.
ಇನ್ನೊಂದು ತಮಾಷೆಯ ವಿಚಾರವೆಂದರೆ, ಇದರಲ್ಲಿ ಭಾಗಿಯಾಗಿರುವವರೇ ಇಂದು ಈ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪತ್ರಕರ್ತರು ಅವರನ್ನೇ ಪ್ರಶ್ನೆ ಕೇಳುತ್ತಾರೆ. ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳ ಬಳಿ ಹೆಸರಿದೆ ಅವರು ಬಹಿರಂಗಪಡಿಸಬೇಕಿದೆ. ಚಿತ್ರರಂಗದ ಕೆಲ ಹಿರಿಯರಿಗೂ ಈ ವಿಚಾರ ಗೊತ್ತಿದೆ. ಆದರೆ ಅವರು ಯಾಕೆ ಮಾತಾನಾಡುತ್ತಿಲ್ಲ. ಇದರ ಬಗ್ಗೆ ನಾನು ಬಹಿರಂಗ ಪಡಿಸಲು ಬೆಂಬಲಬೇಕಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ನನ್ನ ಕೇಳಿದರೆ ನಾನು ಹೇಳುತ್ತೇನೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.