ಬೆಂಗಳೂರು: ಅರ್ಧದಲ್ಲೇ ನಿಂತಿದ್ದ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗಲಿದೆ. ಬಿಗ್‍ಬಾಸ್ ಪ್ರಸಾರವಾಗುವ ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅಧಿಕೃತವಾಗಿ ಮಾಹಿತಿಯನ್ನು ನೀಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯವಾಗಿದೆ ಎಂದಿದ್ದಾರೆ.
ಪೋಸ್ಟ್ನಲ್ಲಿ ಏನಿದೆ?
ಇದೊಂಥರಾ ಎರಡನೇ ಇನ್ನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನ್ನಿಂಗ್ಸ್ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುತ್ತದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್‍ಬಾಸ್ ಶೋದಲ್ಲೂ ಎರಡನೇ ಇನ್ನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ. ಇದನ್ನೂ ಓದಿ: ಜೂನ್ 21 ರಿಂದ ಬಿಗ್‍ಬಾಸ್ ಆಟ ಮತ್ತೆ ಶುರು
ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯವಾಗಿದೆ ಎಂದು ಬಿಗ್‍ಬಾಸ್ ಪ್ರಾರಂಭವಾಗುತ್ತದೆ ಎನ್ನುವ ಸಣ್ಣ ಸುಳಿವನ್ನು ನೀಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ
ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತಾ ಎಂದು ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಬಿಗ್‍ಬಾಸ್ ಮತ್ತೆ ಪ್ರಾರಂಭವಾಗುತ್ತದೆ ಎನ್ನುವ ಸುದ್ದಿ ಸಖತ್ ಖುಷಿಯನ್ನು ತಂದಿದೆ. ಬಿಗ್‍ಬಾಸ್‍ನಲ್ಲಿ ಏನೆಲ್ಲಾ ಬದಲಾವಣೆಗಳು ಇರಲಿವೆ, ಯಾರೆಲ್ಲಾ ಮನೆಯಲ್ಲಿ ಹೊಸ ಆಟವನ್ನೂ ಶುರು ಮಾಡಲಿದ್ದಾರೆ. ಏನೆಲ್ಲಾ ಹೊಸ ಮಸಾಲೆಯನ್ನು ಬಿಗ್‍ಬಾಸ್ ತೆರೆಮೆಲೆ ತರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.