– ಬಡವರಿಗೆ ಜಾಬ್ ಕಾರ್ಡ್ ನೀಡದ್ದಕ್ಕೆ ಶಾಸಕ ಆಕ್ರೋಶ
ಚಾಮರಾಜನಗರ: ಬಡ ಕೂಲಿಗಾರರಿಗೆ ಭಾರೀ ಮೊಸ ಮಾಡ್ತಿದ್ದಾರೆ, ಇವರನ್ನ ಇಲ್ಲೇ ಇಟ್ಟುಕೊಂಡರೆ ಪಂಚಾಯಿತಿ ಖಂಡಿತ ಉದ್ಧಾರ ಆಗುವುದಿಲ್ಲ ಎಂದು ಶಾಸಕ ಆರ್.ನರೇಂದ್ರ ಪಿಡಿಒಗೆ ಚಳಿ ಬಿಡಿಸಿದರು.
ಮಂಗಳವಾರ ಮಂಗಲ ಗ್ರಾಮಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆನಂದ್ ಬಂಡವಾಳ ಬಯಲಾಗಿದೆ. ಒಟ್ಟು 1,137 ಜಾಬ್ ಕಾರ್ಡ್ ಇದ್ದರೂ ಕೇವಲ 100-150 ಮಂದಿಗೆ ಮಾತ್ರ ಕೆಲಸ ನೀಡಲಾಗಿದೆ. ಅಲ್ಲದೆ 637 ಮಂದಿ ಕೂಲಿ ಬೇಕು ಎಂದು ಅರ್ಜಿ ಸಲ್ಲಿಸಿದರು. ಇದನ್ನು ಕಂಡ ಶಾಸಕರು ಕೆಲಸ ನೀಡದಿರುವುದಕ್ಕೆ ಕೆಂಡಾಮಂಡಲರಾದರು.
ಕಚೇರಿಯಲ್ಲಿ ಕುಳಿತು ಸುಮ್ಮನೆ ಆಟ ಆಡಿಕೊಂಡು ಹೋಗಲು ಬರ್ತಿಯಾ, ಇವನ್ನ ಇಲ್ಲೇ ಇಟ್ಟುಕೊಂಡರೆ ಪಂಚಾಯಿತಿ ಖಂಡಿತ ಉದ್ಧಾರವಾಗುವದಿಲ್ಲ. ಬಡವರಿಗೆ ಅನ್ಯಾಯ ಮಾಡುತಿದ್ದೀಯಾ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಹನೂರು ಕ್ಷೇತ್ರದಲ್ಲಿ ಕೂಲಿ ಮಾಡಿ ಜೀವನ ಸಾಗಿಸುವವರೇ ಹೆಚ್ಚಾಗಿದ್ದಾರೆ. ಇವರು ಕೆಲಸ ಇಲ್ಲದೆ ಕೂಲಿ ಅರಸಿ ನಗರ ಪ್ರದೇಶಗಳಿಗೆ ಹಾಗೂ ಕೇರಳ, ತಮಿಳುನಾಡಿನ ಪ್ರದೇಶಗಳಿಗೆ ಹೋಗಿದ್ದರು. ಕೊರೊನಾ ಲಾಕ್ ಡೌನ್‍ನಿಂದಾಗಿ ಎಲ್ಲರೂ ತಮ್ಮ ಗ್ರಾಮಗಳಿಗೆ ಮರಳಿ ಬಂದು, ಜೀವನ ಸಾಗಿಸಲು ಕೂಲಿಗಾಗಿ ಪರಿತಪಿಸುತ್ತಿದ್ದಾರೆ. ಇದನ್ನು ಮನಗಂಡ ಶಾಸಕ ನರೇಂದ್ರ, ನನ್ನ ಕ್ಷೇತ್ರದ ಬಡವರು ಹಸಿವಿನಿಂದ ಇರಬಾರದು ಎಂದು 40 ದಿನಗಳಿಂದಲೂ ಎಲ್ಲ ಗ್ರಾಮಗಳ ಬಡವರನ್ನು ಗುರುತಿಸಿ ಅಹಾರ ಕಿಟ್ ನೀಡಿ ಕೊರೊನಾ ಹರಡದಂತೆ ಮಾಸ್ಕ್ ಕೊಟ್ಟು ಅರಿವು ಮೂಡಿಸುತ್ತಿದ್ದಾರೆ.
ನಂತರ ಎಲ್ಲ ಪಂಚಾಯತಿಗಳಿಗೂ ಭೇಟಿ ನೀಡಿದ್ದಾರೆ. ಪ್ರತಿ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಕೋಟಿಗಟ್ಟಲೆ ಅನುದಾನ ಕೊಳೆಯುತಿತ್ತು. ಇದನ್ನು ಕಂಡು ಅಸಮಾಧಾನಗೊಂಡ ಶಾಸಕರು, ದಿನಕ್ಕೆ ಐದು ಪಂಚಾಯತಿಗಳಿಗೆ ಭೇಟಿ ನೀಡಿ ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಕೆರೆಕಟ್ಟೆಗಳಲ್ಲಿ ನೂರಾರು ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಸೂಚಿಸಿದರು.