– ನಿಮಗೆ ಸಿ.ಟಿ.ರವಿ ಗೊತ್ತಿತ್ತು, ದಿಶಾ ರವಿ ಗೊತ್ತಿತ್ತಾ..?
ಚಿಕ್ಕಮಗಳೂರು: ಬಿಂದರ್ ವಾಲೆಗೆ ಬೆಂಬಲ ಕೊಟ್ಟಿದ್ದಕ್ಕೆ ಇಂದಿರಾಗಾಂಧಿ ಬಲಿಯಾಗಬೇಕಾಯ್ತು. ಕಾಂಗ್ರೆಸ್ಸಿಗೆ ನೆನಪಿರಲಿ. ಎಲ್.ಟಿ.ಟಿ. ಬೆಂಬಲಿಸಿ ರಾಜೀವ್ ಗಾಂಧಿ ಬಲಿಯಾಗಬೇಕಾಯ್ತು. ಜಿನ್ನಾನನ್ನ ಬೆಂಬಲಿಸಿ ಜಿನ್ನಾನ ಮಾನಸಿಕತೆಯನ್ನ ಅರ್ಥ ಮಾಡಿಕೊಳ್ಳದ ಕಾರಣ ದೇಶ ವಿಭಜನೆ ಆಗಬೇಕಾಯ್ತು. ಮತ್ತೆ ಅಂತದ್ದೇ ಪರಿಸ್ಥಿತಿಯನ್ನ ದೇಶಕ್ಕೆ ತಂದಿಡುವಂತಹ ಹೀನ ಕೃತ್ಯ ಮಾಡಬೇಡಿ. ಕಾಂಗ್ರೆಸ್ ಇಬ್ಬರೂ ನಾಯಕರನ್ನು ಕಳೆದುಕೊಂಡರು ಇನ್ನೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
Advertisement
ಚಿಕ್ಕಮಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಅರಾಜಕತೆ ಹುಟ್ಟು ಹಾಕೋದು ಪ್ರಜಾಪ್ರಭುತ್ವದ ಲಕ್ಷಣನಾ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಲ್ವಾ. ದಿಶಾ ರವಿಯನ್ನು ಬಂಧನ ಮಾಡಿರೋದು ಪ್ರಜಾಪ್ರಭುತ್ವವನ್ನ ಉಳಿಸಿದರು ಎಂಬ ಕಾರಣಕ್ಕಲ್ಲ, ಅರಾಜಕತೆ ಸೃಷ್ಟಿಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಬಂಧಿಸಿರುವುದು. ಜನವರಿ 26ನೇ ರಂದು ಏನೇನಾಗುತ್ತೆ, ಮುಂದೆ ಏನು ಮಾಡಬೇಕು ಎಂಬ ಪ್ಲಾನ್ ರೂಪಿಸಿರುವ ಸಂಚಿನ ಮೂಲವನ್ನು ಭೇದಿಸಿ ದಿಶಾ ರವಿಯನ್ನು ಬಂಧಿಸಿರುವುದು. ದಿಶಾ ರವಿ ಯಾರಿಗೆ ಗೊತ್ತಿತ್ತು, ಸಿ.ಟಿ.ರವಿ ನಿಮಗೆ ಗೊತ್ತಿತ್ತು. ಈ ಮುಂಚೆ ನೀವು ಯಾರಾದರೂ ದಿಶಾ ರವಿ ಹೆಸರು ಕೇಳಿದ್ರಾ. ಈಗ ಚರ್ಚೆಗೆ ಬರುತ್ತಿರೋದು. ಈಗ ಬಹಳ ವೈಭವೀಕರಿಸಿ ಮಾತನಾಡುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅವರು ಅರಾಜಕತೆ ಸೃಷ್ಠಿಸುವ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಬಂಧಿಸಲಾಗಿದೆ. ಮುಂದೆ ಹೆಚ್ಚಿನ ಮಾಹಿತಿ ಸಿಕ್ಕಂತೆ ಯಾರ್ಯಾರು ಭಾಗಿಯಾಗಿದ್ದರು, ಎಲ್ಲರೂ ಬಂಧನವಾಗಬೇಕು. ಎಷ್ಟೆ ದೊಡ್ಡವರಾಗಿದ್ದರೂ ಬಂಧನವಾಗಬೇಕು ಎಂದು ಆಗ್ರಹಿಸಿದರು.
Advertisement
Advertisement
ನಮ್ಮ ದೇಶದ ಸಾರ್ವಭೌಮತೆ ಮುಂದೆ ಯಾರೂ ಅಲ್ಲ. ನಮ್ಮ ದೇಶದ ಸಂವಿಧಾನ ನಮಗೆ ದೊಡ್ಡದ್ದು. ನಮ್ಮ ದೇಶದ ಅಖಂಡತೆ ನಮಗೆ ದೊಡ್ಡದ್ದು. ಅಖಂಡತೆ ಹಾಗೂ ಅರಾಜಕತೆಗೆ ಭಂಗ ತರುವವರನ್ನು ಕ್ಷಮಿಸುವ ಮಾತೇ ಇಲ್ಲ. ಅಕಾಲಿದಳದ ವಿರುದ್ಧ ಬಿಂದ್ರನ್ ವಾಲೆಯನ್ನು ಎತ್ತಿಕಟ್ಟಿ, ಖಲಿಸ್ಥಾನ ಚಳುವಳಿಯ ಬೀಜ ಬಿತ್ತಿ ಅದಕ್ಕೆ ಬೆಂಬಲ ಕೊಟ್ಟರು. ಅದರ ಪರಿಣಾಮ ಸಾವಿರಾರು ಜನ ಅಮಾಯಕರು ಬಲಿಯಾದರು. ಸ್ವತಃ ಪ್ರಧಾನಿ ಇಂದಿರಾಗಾಂಧಿಯವರು ಕೂಡ ಆ ಸಣ್ಣ ರಾಜಕೀಯಕ್ಕೆ ಬಲಿಯಾಗಬೇಕಾದ ಕೆಟ್ಟಪರಿಸ್ಥಿತಿ ಬಂತು. ಎಲ್.ಟಿ.ಟಿ. ವಿರುದ್ಧ ಪರ-ವಿರೋಧ ಹಾವು ಏಣಿ ಆಟ ಆಡ್ತಾ ಆಡ್ತಾ ಎಲ್.ಟಿ.ಟಿ.ಗೆ ಬೆಂಬಲ ಕೊಟ್ಟ ಪರಿಣಾಮ ಕೆಟ್ಟ ಪರಿಸ್ಥಿತಿ ಹೇಗೆ ಬಂತೆಂದರೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ದಾರುಣ ಸಾವಿಗೀಡಾಗುವ ಪರಿಸ್ಥಿತಿ ಬಂತು ಎಂದು ವಾಗ್ದಾಳಿ ನಡೆಸಿದರು.
Advertisement
ಜಿನ್ನಾ ನಿಲುವಿಗೆ ಸಮರ್ಥನೆ ಒದಗಿಸಿದ ಕಾರಣಕ್ಕೆ ದೇಶ ವಿಭಜನೆಯಾಗಬೇಕಾದ ಕೆಟ್ಟ ಪರಿಸ್ಥಿತಿ ಬಂತು. ಇವತ್ತು ಮತ್ತೆ ಅಂತಹದೇ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಪ್ರಧಾನಿ ಮೋದಿಯನ್ನು ವಿರೋಧಿಸಬೇಕೆಂದು ಅರಾಜಕ ಶಕ್ತಿಗಳಿಗೆ ದೇಶ ಒಡೆಯುವ ಶಕ್ತಿಗಳಿಗೆ ಬೆಂಬಲ ಕೊಡುವಂತಹ ಕೈಜೋಡಿಸುವಂತೆ ಸಣ್ಣ ಕೆಲಸವನ್ನು ಮಾಡುತ್ತಿದ್ದಾರೆ. ನಿಮಗೆ ಬಾಕಿ ಇನ್ನೇನು ಉಳಿದಿದೆ ಎಂದರು. ತಾವು ಮಾಡಿದ ಕೆಟ್ಟ ನೀತಿಯ ಸಲುವಾಗಿ ತಮ್ಮಿಬ್ಬರು ನಾಯಕರನ್ನು ಕಳೆದುಕೊಳ್ಳಬೇಕಾಯಿತು. ಇನ್ನೇನು ಆಗಬೇಕೆಂದು ನೀವು ಬಯಸಿದ್ದೀರಾ ಎಂದು ಕಾಂಗ್ರೆಸ್ಸಿಗರಿಗೆ ಪ್ರಶ್ನಿಸಿ, ಇತಿಹಾಸವನ್ನು ಅರಿಯದವನು ಇತಿಹಾಸವನ್ನು ಸೃಷ್ಟಿಸಲಾರರು. ಇತಿಹಾಸದಿಂದ ಪಾಠ ಕಲಿಯದವರು ಬದುಕಿನಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನವರು ಇತಿಹಾಸವನ್ನು ಗಮನದಲ್ಲಿಟ್ಟುಕೊಳ್ಳಿ. ನೀವು ಪಾಠ ಕಲಿಯಿರಿ. ಇಲ್ಲವಾದರೆ ದೇಶ ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಪಾಪದ ಕೆಲಸಕ್ಕೆ ಮುಂದಾಗಬೇಡಿ ಎಂದರು.
ಇದೇ ವೇಳೆ, ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮನಸ್ಸಿಗೆ ಮೊಳೆ ಹೊಡೆಯುವ ವಿಚಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಶ್ರೇಯಸ್ಸಲ್ಲ. ಕುಮಾರಸ್ವಾಮಿ ಸಣ್ಣ ಮಟ್ಟಕ್ಕೆ ಆಲೋಚನೆ ಮಾಡುತ್ತಾರೆ ಅಂತ ನನಗೆ ಅನಿಸಿರಲಿಲ್ಲ. ಎಲ್ಲಿ, ಯಾರು ಮೊಳೆ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಜಾತಿಯ ಜನರು ರಾಮ ಮಂದಿರ ನಿರ್ಮಾಣಕ್ಕೆ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡುತ್ತಿದ್ದಾರೆ. ಜನರು ಭಕ್ತಿಯಿಂದ ಕೊಡುವ ಹಣ ಬೇಕೇ ವಿನಾ ದಬ್ಬಾಳಿಕೆಯಿಂದ ಪಡೆಯುವಂತಹದ್ದಲ್ಲ. ಸುಳ್ಳು ಹೇಳುವ ಕೆಲಸ ಖಂಡನೀಯ ಎಂದು ಹೆಚ್.ಡಿ.ಕೆ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದು, ಇದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ತೆಗೆದುಕೊಂಡ ನಿಲುವು. ಈ ನಿಯಮದ ಪುನರುಚ್ಛಾರವನ್ನು ಈಗಿನ ಸಚಿವರು ಮಾಡಿದ್ದಾರೆ. ನಿಯಮ ಮಾಡಬೇಕಾದರೆ ಕಾಂಗ್ರೆಸ್ಸಿನವರು ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ರಾ ಎಂದು ಪ್ರಶ್ನಿಸಿದ್ದಾರೆ. ಈಗ ಅರೆ ಪ್ರಜ್ಞಾವಸ್ಥೆಯಿಂದ ಹೊರ ಬಂದಿದ್ದಾರೆಯೇ ಎಂದು ಕಾಂಗ್ರೆಸ್ಸಿಗರ ವಿರುದ್ಧ ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಮುಸುಕಿನ ಗುದ್ದಾಟವಿದೆ. ಬಹುಶಃ ಗುದ್ದಾಟದ ಕಾರಣಕ್ಕೆ ಸಿದ್ದರಾಮಯ್ಯ ದೆಹಲಿಗೆ ಭೇಟಿ ಕೊಡುತ್ತಿರಬಹುದು. ನಾವು ಸಿದ್ದರಾಮಯ್ಯ ಪರವೂ ಅಲ್ಲ. ಡಿ.ಕೆ.ಶಿವಕುಮಾರ್ ಪರವೂ ಅಲ್ಲ. ನಾವು ಕಾಂಗ್ರೆಸ್ ವಿರುದ್ಧ. ಅವರು ಏನು ಮಾಡಿದರೂ ನಮಗೆ ಸಂಬಂಧ ಇಲ್ಲ ಎಂದು ಗುಡುಗಿದರು.