ಧಾರವಾಡ: ಉಪ ಚುನಾವಣೆ ಅಭ್ಯರ್ಥಿಗಳ ಹೆಸರನ್ನು ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಿ ಕಳುಹಿಸಲಾಗಿದೆ. ಕೇಂದ್ರದ ನಾಯಕರು ಇನ್ನೆರಡು ದಿನಗಳಲ್ಲಿ ಹೆಸರುಗಳನ್ನು ಅಂತಿಮ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಪಶ್ಚಿಮ ಪದವೀಧರ ವಿಧಾನ ಪರಿಷತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಉಪಚುನಾವಣೆಯ ಶಿರಾ, ಆರ್.ಆರ್. ನಗರ ಕ್ಷೇತ್ರಗಳಲ್ಲಿ ನಮಗೆ ಒಳ್ಳೆ ಸ್ಪಂದನೆ ಇದೆ. ಶಿರಾದಲ್ಲಿ ಕಾಂಗ್ರೆಸ್, ಜೆಡಿಎಸ್ ಮತದಾರರು ಬಿಜೆಪಿಯತ್ತ ಬರುತ್ತಿದ್ದಾರೆ. ಹೀಗಾಗಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.
ಕೋರ್ ಕಮೀಟಿಯಲ್ಲಿ ಚರ್ಚಿಸಿ ಹೆಸರು ಫೈನಲ್ ಮಾಡಿ ಅಭ್ಯರ್ಥಿಗಳ ಹೆಸರುಗಳನ್ನು ಈಗಾಗಲೇ ಕೇಂದ್ರಕ್ಕೆ ಕಳುಹಿಸಿದ್ದೇವೆ. ಇನ್ನೆರಡು ದಿನಗಳಲ್ಲಿ ಹೈಕಮಾಂಡ್ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಗೆ ಸಹ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಪದವೀಧರ, ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಮತದಾರರೇ ಇದ್ದಾರೆ ಎಂದು ಇದೇ ವೇಳೆ ತಿಳಿಸಿದರು.