ಇದೇ ದಿನ 1994ರಲ್ಲಿ ಅಜೇಯ 501 ರನ್ ಸಿಡಿಸಿದ್ದ ಬ್ರಿಯಾನ್ ಲಾರಾ

Public TV
2 Min Read
lara 501

ಪೋರ್ಟ್ ಆಫ್ ಸ್ಪೇನ್: ದೊಡ್ಡ ಇನ್ನಿಂಗ್ಸ್ ಆಡುವ ವಿಷಯ ಬಂದಾಗ, ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಬ್ರಿಯಾನ್ ಲಾರಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಇತರ ಬ್ಯಾಟ್ಸ್‌ಮನ್‌ಗಳಿಗೆ ಅಸಾಧ್ಯವಾದ ಮೈಲಿಗಲ್ಲುಗಳನ್ನು ನೆಟ್ಟಿದ್ದಾರೆ.

ಅಂತಹ ದಾಖಲೆ ಇದೇ ದಿನ 1994ರಲ್ಲಿ ಇತಿಹಾಸದ ಪುಟ ಸೇರಿತ್ತು. ಅಂದಿನ ಮಾಂತ್ರಿಕ ಬ್ಯಾಟಿಂಗ್‍ನಿಂದ ಬ್ರಿಯಾನ್ ಚಾರ್ಲ್ಸ್ ಲಾರಾ ಅವರು ಪ್ರಥಮ ದರ್ಜೆ ಕ್ರಿಕೆಟ್‍ನ ಇನ್ನಿಂಗ್ಸ್ ನಲ್ಲಿ 500 ರನ್ ಗಳಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವೇಳೆ ಅವರು ಅಜೇಯ 501 ರನ್ ಗಳಿಸಿದ್ದರು.

lara 501 3

ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 100, 200, 300, 400 ಮತ್ತು 500 ರನ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹಿರಿಮೆ ಲಾರಾ ಅವರಿಗೆ ಸಲ್ಲುತ್ತದೆ. ಈವರೆಗೂ ಬೇರೆ ಯಾವುದೇ ಬ್ಯಾಟ್ಸ್‌ಮನ್‌ ಈ ಸಾಧನೆ ಮಾಡಿಲ್ಲ.

1958ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಮಾಜಿ ಕ್ರಿಕೆಟರ್ ಗ್ಯಾರಿ ಸೋಬರ್ಸ್ ಅವರು ಅಜೇಯ 365 ರನ್ ಗಳಿಸಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆ ಬರೆದಿದ್ದರು. ಆದರೆ 1994 ಏಪ್ರಿಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಲಾರಾ 375 ರನ್ ಚಚ್ಚಿ ದಾಖಲೆ ಮುರಿದಿದ್ದರು. ಆದರೆ ಇಷ್ಟಕ್ಕೆ ನಿಲ್ಲಿಸದ ಅವರು ಎರಡು ತಿಂಗಳ ಬಳಿಕ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‍ನ ಇನ್ನಿಂಗ್ಸ್ ನಲ್ಲಿ ವಿಶೇಷ ದಾಖಲೆ ಬರೆದರು. ಅಂದು ವಾರ್ವಿಕ್‍ಷೈರ್ ಪರ ಆಡಿದ ಲಾರಾ ಡರ್ಹಾಮ್ ವಿರುದ್ಧ ಅಜೇಯ 501 ರನ್ ಗಳಿಸಿದ್ದರು.

lara 501 2

ಹನೀಫ್ ಮೊಹಮ್ಮದ್:
ಪಾಕಿಸ್ತಾನ ಮಾಜಿ ಕ್ರಿಕೆಟರ್ ಹನೀಫ್ ಮೊಹಮ್ಮದ್ 1959ರಲ್ಲಿ ವಹಾವಲ್ಪುರ್ ವಿರುದ್ಧ ಕರಾಚಿ ಪರ ಆಡುತ್ತಿದ್ದರು. ಕುತೂಹಲಕಾರಿಯಾಗಿ ರನ್ ಗಳಿಸಿದ ಅವರು ಇನ್ನೇನು 3 ರನ್ ಗಳಿಸಿದ್ದರೆ ಲಾರಾ ಅವರ ದಾಖಲೆ ಮುರಿಯುತ್ತಿದ್ದರು. ಆದರೆ 499 ರನ್ ಗಳಿಸಿದ್ದಾಗ ರನೌಟ್ ಆಗಿದ್ದರು.

ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧ ಆಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಡೇ ನೈಟ್ ಟೆಸ್ಟ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅಜೇ 335 ರನ್ ಚಚ್ಚಿದ್ದರು. ಈ ವೇಳೆಯಲ್ಲಿ ಆಸೀಸ್ ಡಿಕ್ಲೇರ್ ಘೋಷಿಸಿದ್ದ ಪರಿಣಾಮ ವಾರ್ನರ್‌ಗೆ ದಾಖಲೆ ಬರೆಯುವ ಅವಕಾಶ ಕೈತಪ್ಪಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಲಾರಾ, ನಾನು ಡೇವಿಡ್ ವಾರ್ನರ್ ಜತೆಗೆ ಮಾತನಾಡಿದ್ದೇನೆ. ಇದು ತಂಡದ ನಿರ್ಧಾರವಾಗಿತ್ತು. ಅಲ್ಲಿ ಮಳೆ ಬರುವ ಸಾಧ್ಯತೆಗಳಿದ್ದವು ಎಂದು ಲಾರಾ ತಿಳಿಸಿದ್ದರು.

Share This Article