ನವದೆಹಲಿ: ಇದು ಒಂದು ಯುಗದ ಅಂತ್ಯ ಎಂದು ಹೇಳುವ ಮೂಲಕ ಎಂಎಸ್ ಧೋನಿ ಅವರ ನಿವೃತ್ತಿಯ ಬಗ್ಗೆ ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಆಟಗಾರ ಸೌರವ್ ಗಂಗೂಲಿಯವರು ಪೋಸ್ಟ್ ಹಾಕಿಕೊಂಡಿದ್ದಾರೆ.
ಶನಿವಾರ ಸಂಜೆ ಎಂಎಸ್ ಧೋನಿಯವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ನಿವೃತ್ತಿ ಘೋಷಣೆ ಮಾಡಿದರು. ಈ ಮೂಲಕ ಭಾರತದ ಚಾಣಾಕ್ಷ ನಾಯಕ ಅದ್ಭುತ ವಿಕೆಟ್ ಕೀಪರ್ ಧೋನಿ ವಿದಾಯದ ಪಂದ್ಯವನ್ನು ಆಡದೇ ನಿವೃತ್ತಿ ಘೋಷಣೆ ಮಾಡಿದರು. ಈಗ ಧೋನಿಯ ಬಗ್ಗೆ ಪೋಸ್ಟ್ ಹಾಕಿಕೊಂಡಿರುವ ಸೌರವ್ ಗಂಗೂಲಿಯವರು, ಆತ ಒಬ್ಬ ಉತ್ತಮ ನಾಯಕ ಎಂದು ಹಾಡಿ ಹೊಗಳಿದ್ದಾರೆ.
Advertisement
https://www.instagram.com/p/CD6pnFSAAcY/
Advertisement
ಇದು ಒಂದು ಯುಗದ ಅಂತ್ಯ. ಆತ ದೇಶ ಮತ್ತು ವಿಶ್ವ ಕ್ರಿಕೆಟ್‍ನ ಉತ್ತಮ ಆಟಗಾರ. ಆತನ ನಾಯಕತ್ವದ ಗುಣಗಳು ಅದ್ಭುತವಾಗಿದ್ದವು. ಅದರಲ್ಲೂ ಏಕದಿನ ಮತ್ತು ಟಿ-20 ಪಂದ್ಯಗಳಲ್ಲಿ ಆತನ ನಾಯಕತ್ವ ಮತ್ತು ಬ್ಯಾಟಿಂಗ್ ವೈಖರಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಎಲ್ಲ ಒಳ್ಳೆಯ ವಿಚಾರಕ್ಕೂ ಅಂತ್ಯ ಎಂಬುದು ಇರುತ್ತದೆ. ಆದರೆ ಇದು ಸಂಪೂರ್ಣ ಅದ್ಭುತವಾದ ಅಂತ್ಯ. ಧೋನಿ ವಿಕೆಟ್ ಕೀಪಿಂಗ್ ವಿಚಾರದಲ್ಲಿ ಒಂದು ಉತ್ತಮ ಮಾನದಂಡವನ್ನು ಸೆಟ್ ಮಾಡಿದ್ದಾರೆ. ಮೈದಾನದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲದೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಅವರ ಜೀವನ ಚೆನ್ನಾಗಿರಲಿ ಎಂದು ಗಂಗೂಲಿ ಬರೆದುಕೊಂಡಿದ್ದಾರೆ.
Advertisement
Advertisement
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ನಾಯಕ ವಿಚಾರವನ್ನು ತೆಗೆದುಕೊಂಡರೆ ಸೌರವ್ ಗಂಗೂಲಿ ಮತ್ತು ಧೋನಿ ಮುಂಚೂಣಿಗೆ ಬರುತ್ತಾರೆ. ಧೋನಿಯವರು ವೈಟ್-ಬಾಲ್ ಕ್ರಿಕೆಟ್‍ನಲ್ಲಿ ನಾಯಕನಾಗಿ ಮೂರು ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ. 2007ರ ಚೊಚ್ಚಲ ಟಿ-20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಧೋನಿ ಅವರ ನಾಯಕ್ವದಲ್ಲಿ ಗೆದ್ದಿತ್ತು.
ನಾಯಕ್ವದ ವಿಚಾರದಲ್ಲಿ ಗಂಗೂಲಿ ಮತ್ತು ಧೋನಿಯವರ ಅಂಕಿಅಂಶಗಳನ್ನು ನೋಡುವುದಾದರೆ, ಧೋನಿ 60 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 27 ಪಂದ್ಯದಲ್ಲಿ ಜಯಗಳಿಸಿ 27 ಪಂದ್ಯಗಳನ್ನು ಸೋತ್ತಿದ್ದಾರೆ. ಗಂಗೂಲಿಯವರು 50 ಟೆಸ್ಟ್ ಪಂದ್ಯಗಳಲ್ಲಿ 21 ಗೆಲುವುಗಳು ಮತ್ತು 13 ಸೋಲುಗಳನ್ನು ಕಂಡಿದ್ದಾರೆ. ಗಂಗೂಲಿಯವರು 146 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಇದರಲ್ಲಿ 76 ಪಂದ್ಯಗಳನ್ನು ಗೆದ್ದಿದ್ದಾರೆ. ಧೋನಿಯವರು ಬರೋಬ್ಬರಿ 200 ಏಕದಿನ ಪಂದ್ಯಗಳಲ್ಲಿ ನಾಯಕ್ವ ವಹಿಸಿ 110 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.