ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇನ್‍ಸ್ಟಾಗ್ರಾಮ್ ಮೂಲಕವಾಗಿ ಮುದ್ದಿನ ಮಡದಿಗೆ ರಿಷಭ್ ಸಾಲುಗಳ ಮೂಲಕ ಸಖತ್ ಕ್ಯೂಟಾಗಿ ವಿಶ್ ಮಾಡಿ ಸುದ್ದಿಯಾಗಿದ್ದಾರೆ.
ರಿಷಭ್ ಶೆಟ್ಟಿ ಹಾಗೂ ಪ್ರಗತಿ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಸರಳವಾಗಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಚಾರವನ್ನು ರಿಷಭ್ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡು ಮಡದಿ ಕುರಿತಾಗಿ ಕೆಲವು ಸಾಲುಗಳನ್ನು ಮುದ್ದಾಗಿ ಬರೆದುಕೊಂಡಿದ್ದಾರೆ. ರಿಷಭ್ ಶೆಟ್ಟಿ ವಿಶ್ ಮಾಡಿರುವ ರೀತಿ ಕಂಡ ನೆಟ್ಟಿಗರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ನಿನ್ನ ಕೈ ಹಿಡಿದು ಹೊಸದೊಂದು ಮೈಲಿಗಲ್ಲನ್ನು ತಲುಪಿದ್ದೇನೆ. ಹಿಂತಿರುಗಿ ನೋಡಿದರೆ, ಕಾಣುವುದೆಲ್ಲಾ ಕಷ್ಟ ಮರೆಸುವ ನಿನ್ನ ಮುಗ್ಧತೆಯಾಗಿದೆ. ನನ್ನನ್ನೂ ಮಗುವಾಗಿಸಿಬಿಡುವ ಮುಗ್ಧತೆ ನಿನಗಿದೆ. ಮಡದಿಯಾಗಿ, ತಾಯಿಯಾಗಿ ಬದುಕಿನೆಡೆಗಿರುವ ನಿನ್ನ ಬದ್ಧತೆ ಇದೆ. ಇದಕ್ಕಿಂತ ಮತ್ತೇನು ಬೇಕು ನನಗೆ?.. ಇಚ್ಛೆಯನರಿತು ನೆಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದಿದ್ದಾನೆ ಸರ್ವಜ್ಞ. ಸದ್ಯಕ್ಕೆ ನಾವು ಕಿಚ್ಚು ಗಿಚ್ಚು ಹಚ್ಚದೇ ಈ ಸಂಭ್ರಮದಲ್ಲೊಂದು ಒಲವಿನ ದೀಪ ಹಚ್ಚೋಣಾ ಬಾ. ಐ ಆ್ಯಮ್ ಲಕ್ಕಿ ಟು ಹಾವೇ ಯು ಇನ್ ಮೈ ಲೈಫ್..ಹ್ಯಾಪಿ ಆನಿವರ್ಸರಿ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಮುದ್ದಾದ ಜೋಡಿಗೆ ನೆಟ್ಟಿಗರು ಶುಭ ಹಾರೈಸಿದ್ದಾರೆ. ರಿಷಭ್ ಅವರು ಪತ್ನಿಯ ಕುರಿತಾಗಿ ಬರೆದಿರುವ ಸಾಲುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.