– ಬೆಳಗಾವಿ ನಮ್ಮದು, ರಾಜ್ಯದ ಅವಿಭಾಜ್ಯ ಅಂಗ
ಬೆಂಗಳೂರು: ಇತ್ಯರ್ಥವಾಗಿರುವ ವಿಷಯವನ್ನ ಕೆಣಕಲು ಬರಬೇಡಿ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಅಧಿಕಪ್ರಸಂಗತನದ ಹೇಳಿಕೆ ಖಂಡನೀಯ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ. ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ. ಉದ್ಧವ್ ಠಾಕ್ರೆ ಅವರೇ, ಇತ್ಯರ್ಥವಾಗಿರುವ ವಿಷಯವನ್ನುವ ಕೆಣಕಿ ರಾಜಕೀಯ ಮಾಡಲು ಹೋಗಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.
ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಉದ್ಧಟತನದ ಹೇಳಿಕೆಗೆ ಸಿಎಂ ಯಡಿಯೂರಪ್ಪ ಅವರು ಅಧಿಕೃತವಾಗಿ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ, ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಎಚ್ಚರಿಕೆಯ ಸಂದೇಶವನ್ನ ರವಾನಿಸಿದ್ದಾರೆ.
‘ಮಹಾ’ ಸಿಎಂ ಹೇಳಿಕೆಗೆ ಬಿಎಸ್‍ವೈ ತಿರುಗೇಟು: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿದ್ದಾರೆ. ಇದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ.
ಹೀಗಿರುವಾಗ ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ.
ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ ಎಂದು ತಿರುಗೇಟು ನೀಡಿದ್ದಾರೆ.
ಸಿಎಂ ಠಾಕ್ರೆ ಹೇಳಿದ್ದೇನು?: ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಹುಸಂಖ್ಯೆಯಲ್ಲಿ ಮರಾಠಿ ಭಾಷಿಕರಿರುವ ಹಾಗೂ ಮರಾಠಿ ಸಂಸ್ಕೃತಿಯನ್ನು ಒಳಗೊಂಡಿರುವ ಕೆಲವು ಪ್ರದೇಶವನ್ನು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳಲು ಸರ್ಕಾರ ಬದ್ಧವಾಗಿದೆ. ಇದು ಗಡಿ ವಿವಾದಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ನೀಡುವ ನಿಜವಾದ ಗೌರವವಾಗಿದೆ ಎಂದು ಮಹಾರಾಷ್ಟ್ರ ಸಿಎಂ ಕಚೇರಿ ಟ್ವೀಟ್ ಮಾಡಿತ್ತು.