ಬೆಂಗಳೂರು: ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿ ಕುರಿತು ಚರ್ಚಿಸಲು ರಾಜ್ಯಕ್ಕೆ ಆಗಮಿಸಿರುವ ನೀತಿ ಆಯೋಗದ ಸಮಾಲೋಚಕರಾದ ಸನ್ಯುಕ್ತಾ ಸಮದ್ದಾರ್ ಅವರನ್ನು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಹೂಗುಚ್ಛ ನೀಡುವ ಮೂಲಕ ಸ್ವಾಗತ ಕೋರಿದರು.
ಇಂದು ಮತ್ತು ನಾಳೆ ವಿಕಾಸಸೌಧದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಭಾಗವಹಿಸಲಿದ್ದು ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆವಹಿಲಿದ್ದಾರೆ.
ಕರ್ನಾಟಕದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಾಂಕಗಳ ಪ್ರಗತಿಯನ್ನು ಇನ್ನಷ್ಟು ಸುಧಾರಿಸಲು ಹಾಗೂ ಇತರ ರಾಜ್ಯಗಳಲ್ಲಿ ಆಗುತ್ತಿರುವ ಉತ್ತಮ ಯೋಜನೆಗಳ/ಸಾಧನೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಅಲ್ಲದೇ ವಿಶೇಷವಾಗಿ ಕೇಂದ್ರ ಸರ್ಕಾರದ ಬಡತನ ನಿರ್ಮೂಲನೆಗಾಗಿ ಬಹು ಆಯಾಮದ ಬಡತನ ಸೂಚ್ಯಾಂಕಗಳ ಬಗ್ಗೆ ಎಲ್ಲಾ ರಾಜ್ಯಗಳೊಂದಿಗೆ ನೀತಿ ಆಯೋಗದ ಮೂಲಕ ಕೆಲವು ಕಾರ್ಯತಂತ್ರಗಳನ್ನು ಹಂಚಿಕೊಳ್ಳಲಾಗುವುದು.
ಇಂದಿನ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮಾ ಹಾಗೂ ಶಾಲಿನಿ ರಜನೀಶ್ ಅವರು ಸೇರಿದಂತೆ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.