ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ನೆನೆದು ‘ಕೈ’ ಕುಟುಕಿದ ಪ್ರಧಾನಿ ಮೋದಿ, ಶಾ

Public TV
2 Min Read
Indira Gandhi Amit Shah Modi

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ನೇತೃತ್ವದ ಸರ್ಕಾರ 1975ರಲ್ಲಿ ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿ ಇಂದಿಗೆ 45 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಅನ್ನು ಕುಟುಕಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, “ನಿಖರವಾಗಿ 45 ವರ್ಷಗಳ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಆ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿದ, ಚಿತ್ರಹಿಂಸೆ ಅನುಭವಿಸಿದವರಿಗೆ ನಮಸ್ಕರಿಸುತ್ತೇನೆ. ಅವರ ತ್ಯಾಗ ಮತ್ತು ಹೋರಾಟವನ್ನು ದೇಶ ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಅವರು ಇಂದಿರಾ ಗಾಂಧಿ ಕುಟುಂಬವನ್ನು ಗುರಿಯಾಗಿಸಿಕೊಂಡಿದ್ದರು. ಅಧಿಕಾರದ ದುರಾಸೆಯಲ್ಲಿ ಒಂದು ಕುಟುಂಬವು ದೇಶವನ್ನು ತುರ್ತು ಪರಿಸ್ಥಿತಿಗೆ ಆಮಿಷವೊಡ್ಡಿತ್ತು. ರಾತ್ರೋರಾತ್ರಿ ಇಡೀ ದೇಶವನ್ನು ತುರ್ತು ಪರಿಸ್ಥಿತಿಗೆ ತಳ್ಳಿಬಿಟ್ಟಿತು. ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಲಯ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿತ್ತು. ಆ ಸಮಯದಲ್ಲಿ ಬಡವರನ್ನು ಹಿಂಸಿಸಲಾಯಿತು ಎಂದು ಕುಟುಕಿದ್ದಾರೆ.

ಮಾಧ್ಯಮ ವರದಿಯನ್ನು ಟ್ವೀಟ್ ಮಾಡಿದ ಅಮಿತ್ ಶಾ, ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ಕೆಲವು ವಿಷಯಗಳನ್ನು ಎತ್ತಿದ್ದರು. ಆದರೆ ಅವರ ಮಾತುಗಳನ್ನು ಕೇಳಲೇ ಇಲ್ಲ. ಪಕ್ಷದ ವಕ್ತಾರರನ್ನು ಸಭೆಯಿಂದ ಹೊರಗೆ ಹಾಕಲಾಗಿತ್ತು. ಸತ್ಯವೆಂದರೆ ಅಂದಿನ ಪರಿಸ್ಥಿತಿ ಕಾಂಗ್ರೆಸ್ ನಾಯಕರನ್ನು ಉಸಿರುಗಟ್ಟಿಸಿತ್ತು ಎಂದು ಹೇಳಿದ್ದಾರೆ.

ಮತ್ತೊಂದು ಟ್ವಿಟ್ ಮಾಡಿವ ಅಮಿತ್ ಶಾ, “ಸದ್ಯ ಪ್ರತಿಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ತುರ್ತು ಪರಿಸ್ಥಿತಿ ಕುರಿತು ಕೆಲ ವಿಚಾರವಾಗಿ ತಾನೇ ವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ತುರ್ತು ಮನಸ್ಥಿತಿ ಏಕೆ ಉಳಿದಿದೆ? ಒಂದು ಕುಟುಂಬ ಜನರನ್ನು ಹೊರತುಪಡಿಸಿ ನಾಯಕರಿಗೆ ಏಕೆ ಮಾತನಾಡಲು ಅವಕಾಶವಿಲ್ಲ? ಕಾಂಗ್ರೆಸ್‍ನಲ್ಲಿ ನಾಯಕರು ಏಕೆ ನಿರಾಶರಾಗುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.

ಅಮಿತ್ ಶಾ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಆಡಳಿತ ಪಕ್ಷವಾಗಿರುವುದರಿಂದ ಬಿಜೆಪಿ ಇದಕ್ಕೆ ಕೊಡುವುದು ಅಗತ್ಯವಿದೆ. ಪ್ರಧಾನಿ ಮೋದಿ ಸರ್ಕಾರವನ್ನು ಕೇವಲ ಎರಡು ಜನರ ಸರ್ಕಾರ ಎಂದು ಏಕೆ ಕರೆಯುತ್ತಾರೆ? ಇತರ ಜನರನ್ನು ಏಕೆ ಹೊರಗಿಡಲಾಗಿದೆ? ಕುದುರೆ ವ್ಯಾಪಾರ ಏಕೆ ನಡೆಯುತ್ತಿದೆ? ನೆಹರೂ-ಗಾಂಧಿ ಅವರನ್ನು ಏಕೆ ದ್ವೇಷಿಸುತ್ತಾರೆ ಎಂದು ಮರು ಪ್ರಶ್ನೆ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *