– ಲಾಕ್‍ಡೌನ್ ಕಷ್ಟದಲ್ಲಿ ಕುಟುಂಬಕ್ಕೆ ಆಸರೆ
ಕೊಪ್ಪಳ: ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು, ಕೆಲಸದ ನಿರೀಕ್ಷೆಯಲ್ಲಿ ಇದ್ದ ಪದವೀಧರರಿಗೂ ಮಹಾಮಾರಿ ಕೊರೊನಾ ಸಂಕಷ್ಟವನ್ನು ಉಂಟು ಮಾಡಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಕೆಲಸದ ನಿರೀಕ್ಷೆಯಲ್ಲಿದ್ದ ಯುವಕನಿಗೆ ಸರ್ಕಾರದ ನರೇಗಾ ಯೋಜನೆಯು ಆಸರೆ ಆಗಿದೆ.
ಕೊಪ್ಪಳ ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದ ಬಡ ಕುಟುಂಬದ ನಿವಾಸಿ ರಾಮಾಂಜನೇಯ ಬೆಂಗಳೂರಿನಲ್ಲಿ ಬಿಇ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರು. ಬಿಇ ಮುಗಿಸಿಕೊಂಡು ಕೆಲಸಕ್ಕೆ ಹುಡುಕುವ ವೇಳೆಯಲ್ಲಿಯೇ ಕೋವಿಡ್ ಅಲೆಯಿಂದಾಗಿ ಲಾಕ್‍ಡೌನ್ ಘೋಷಣೆ ಆಯ್ತು. ಉದ್ಯೋಗ ಇಲ್ಲದೆ ಮಾನಸಿಕವಾಗಿ ನೊಂದ ರಾಮಾಂಜನೇಯ ಬರಿಗೈಯಲ್ಲಿ ಗ್ರಾಮಕ್ಕೆ ವಾಪಸ್ಸ ಆಗಮಿಸಿದ್ದರು. ಉದ್ಯೋಗ ಇಲ್ಲದೆ ಗ್ರಾಮದಲ್ಲಿ ತಿಂಗಳುಗಳ ಕಾಲ ಕಳೆದ ವಿದ್ಯಾರ್ಥಿಗೆ ಸದ್ಯ ಉದ್ಯೋಗ ಖಾತರಿ ಯೋಜನೆಯು ಆಸರೆಯಾಗಿದೆ.
Advertisement
Advertisement
ಗ್ರಾಮದಲ್ಲಿ ವಿದ್ಯಾರ್ಥಿಯ ಕುಟುಂಬಸ್ಥರು, ಗ್ರಾಮಸ್ಥರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುವುದನ್ನು ಕಂಡು ರಾಮಾಂಜನೇಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತಾನು ಕೂಡ ನರೇಗಾ ಯೋಜನೆಯಲ್ಲಿ ಕೆಲಸ ಮಾಡಲು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ನಿಯಮಗಳ ಪ್ರಕಾರ ಅರ್ಜಿಯನ್ನು ಪಡೆದುಕೊಂಡು, ವಿದ್ಯಾರ್ಥಿಗೆ ಕೆಲಸವನ್ನು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ರಾಮಾಂಜನೇಯ ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಆಸರೆಯಾಗುವುದರ ಜೊತೆಗೆ ಆತನ ಹೆಚ್ಚಿನ ವಿದ್ಯಾಭ್ಯಾಸಕ್ಕೂ ಕೂಡ ಅನುಕೂಲವಾಗಿದೆ.
Advertisement
Advertisement
ಆನ್‍ಲೈನ್ ಕ್ಲಾಸ್‍ಗೂ ಅನುಕೂಲ: ಹೊರಗಡೆ ಕೆಲಸ ಇಲ್ಲದೆ ಮನೆಯಲ್ಲಿ ಇದ್ದ ರಾಮಾಂಜನೇಯ ನರೇಗಾದಡಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಕೆಲಸಕ್ಕೆ ತಕ್ಕ ಕೂಲಿಯನ್ನು ನೇರವಾಗಿ ಖಾತೆಗೆ ಜಮಾ ಆಗುತ್ತಿರೋದರಿಂದ ರಾಮಾಂಜನೇಯನಿಗೆ ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಆಸೆಯನ್ನು ಹೊಂದಿರುವ ವಿದ್ಯಾರ್ಥಿಗೆ ನರೇಗಾದಿಂದ ಆರ್ಥಿಕ ಸಹಾಯಕ್ಕೆ ಆಗುತ್ತಿರುವುದರಿಂದ ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದ್ದಾರೆ. ಬರುವ ಕೂಲಿ ಹಣದಲ್ಲಿ ಕುಟುಂಬಕ್ಕೆ ಒಂದಿಷ್ಟು ನೀಡಿ, ತನ್ನ ಅಭ್ಯಾಸಕ್ಕೂ ಕೂಡ ಬಳಕೆ ಮಾಡುತ್ತಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ಇರುವ ರಾಮಾಂಜನೇಯ ಅದಕ್ಕೆ ಸಂಬಂಧಪಟ್ಟಂತೆ ಆನ್‍ಲೈನ್ ತರಗತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕುಟುಂಬಸ್ಥರಿಗೆ ಹೊರೆಯಾಗಿದ್ದ ರಾಮಾಂಜನೇಯ ನರೇಗಾ ಯೋಜನೆಯು ಆಸರೆಯಾಗಿದ್ದು, ಬರುವ ಕೂಲಿ ಹಣದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಸೂಪರ್ ಟೆಕ್ನಾಲಜಿ ಅಭಿವೃದ್ಧಿ ಪಡಿಸಿದವರಿಗೆ 729 ಕೋಟಿ ಬಹುಮಾನ ಘೋಷಿಸಿದ ಮಸ್ಕ್
ಇಂಜಿನಿಯರಿಂಗ್ ಮುಗಿಸಿಕೊಂಡು ಕಳೆದ ವರ್ಷ ಕೋವಿಡ್ ಸಮಯಕ್ಕೆ ಗ್ರಾಮಕ್ಕೆ ಆಗಮಿಸಿದೆ. ಎಲ್ಲೂ ಕೆಲಸ ಸಿಗದೇ ಇರುವುದರಿಂದ ನಮ್ಮೂರಲ್ಲಿಯೇ ಉದ್ಯೋಗ ಖಾತರಿ ಯೋಜನಯಲ್ಲಿ ಕೆಲಸ ಮಾಡುತ್ತಿದ್ದೆನೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನರೇಗಾದಡಿಯಲ್ಲಿ ಕೆಲಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ನಡೆಸುತ್ತಿದ್ದೆನೆ. ನರೇಗಾ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನೂ ಓದಿ: ಕೃಷಿಯಲ್ಲಿ ಯಶಸ್ಸು ಕಂಡ ಕಾನೂನು ಪದವೀಧರೆ – ದಿನಕ್ಕೆ 30 ಸಾವಿರ ರೂ. ವ್ಯಾಪಾರ