ಹಾಸನ: ಹೋಟೆಲ್‍ನಲ್ಲಿ ಆಹಾರವನ್ನು ಎಂಜಲು ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಹೋಟೆಲ್‍ನ್ನು ಸೀಲ್‍ಡೌನ್ ಮಾಡಿದ್ದಾರೆ.
ನಗರದ ಹೋಟೆಲ್ ಒಂದರಲ್ಲಿ ಹೋಟೆಲ್ ಮಾಲೀಕನ ಮಗ ಗ್ರಾಹಕರಿಗೆ ನೀಡುವ ಆಹಾರವನ್ನು ಎಂಜಲು ಮಾಡುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಹೋಟೆಲ್ ಬಾಗಿಲು ಹಾಕಿಸಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.
ಏನಿದು ಪ್ರಕರಣ?
ಓರ್ವ ವ್ಯಕ್ತಿ ಹೋಟೆಲ್ ಒಳಗೆ ನಿಂತುಕೊಂಡು ಗ್ರಾಹಕರಿಗೆ ನೀಡಲು ಪಾತ್ರೆಯೊಳಗೆ ಸಂಗ್ರಹಿಸಿಟ್ಟಿರುವ ಆಹಾರವನ್ನು ಸ್ಟಿಕ್‍ನಿಂದ ಪದೇ ಪದೆ ತಿನ್ನುತ್ತಿದ್ದಾನೆ. ಇದನ್ನು ಅಲ್ಲೇ ಇದ್ದವರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಸನದ ದೊಡ್ಡ ಹೋಟೆಲ್‍ನಲ್ಲಿಯೇ ಈ ರೀತಿ ನಡೆದಿದ್ದು, ಹೋಟೆಲ್‍ಗಳಲ್ಲಿ ಈ ರೀತಿಯೂ ಮಾಡಲಾಗುತ್ತಿದೆ ಎಂದೂ ಬರೆಯಲಾಗಿದೆ. ವಿಡಿಯೋ ಹರಿದಾಡುತ್ತಿದ್ದಂತೆ ಪೊಲೀಸರು ಹೋಟೆಲ್ ಪತ್ತೆಹಚ್ಚಿದ್ದು, ಹೋಟೆಲ್ ಮಾಲೀಕನಿಂದ ಮಾಹಿತಿ ಪಡೆಯುತ್ತಿದ್ದಾರೆ. ವಿಡಿಯೋದಲ್ಲಿ ಆಹಾರ ಎಂಜಲು ಮಾಡುತ್ತಿರುವ ವ್ಯಕ್ತಿ ಯಾರು, ಈ ವಿಡಿಯೋ ಯಾವಾಗ ಮಾಡಿದ್ದು ನಿಮಗೆ ಗೊತ್ತಾ ಎಂಬೆಲ್ಲ ಮಾಹಿತಿ ಕಲೆಹಾಕಲಾಗುತ್ತಿದೆ.