ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬಾದಾಮಿ ತಾಲೂಕಿನ ಜಂಗವಾಡ ಗ್ರಾಮದ ಬಳಿ ಹೊಲದಲ್ಲಿ ನಡೆದಿದೆ.
ಘಟನೆಯಲ್ಲಿ 36 ವರ್ಷದ ದುರ್ಗಪ್ಪ ಭೀಮಪ್ಪ ಮಾದರ್, 56 ವರ್ಷದ ದೇವಕೆವ್ವ ಭೀಮಪ್ಪ ಮಾದರ್ ಕೊಲೆಯಾಗಿರುವ ದುರ್ದೈವಿಗಳಾಗಿದ್ದಾರೆ. ಶಿವಪ್ಪ ಮಾದರ, ಉಮೇಶ್ ಮಾದರ, ಕಾಮಪ್ಪ ಮಾದರ, ಹನುಮಂತ ಮಾದರ, ಪ್ರಕಾಶ್ ಮಾದರ, ರವಿ ಮಾದರ, ರಮೇಶ್ ಮಾದರ, ಬಸವರಾಜ ಮಾದರ, ಸೇರಿದಂತೆ ಒಂಬತ್ತು ಜನ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹೊಲದ ವಿಚಾರವಾಗಿ ಕೊಲೆ ಆರೋಪಿ ಉಮೇಶ್ ಮಾದರ್ ಹಾಗೂ ದುರ್ಗಪ್ಪ ಮಾದರ್ ಕುಟುಂಬದ ಮಧ್ಯೆ ಕಲಹ ಏರ್ಪಟ್ಟಿತ್ತು. ಈ ಕಲಹ ಕೋರ್ಟ್ ಮೆಟ್ಟಿಲೇರಿ, ಹೊಲ ದುರ್ಗಪ್ಪ ಮಾದರ್ ಅವರಿಗೆ ಸೇರಿದ್ದು ಎಂದು ನ್ಯಾಯಾಲಯ ತೀರ್ಪು ಸಹ ನೀಡಿತ್ತು. ಇದರಿಂದ ಮನುಷ್ಯತ್ವ ಕಳೆದುಕೊಂಡ ಉಮೇಶ್ ಮಾದರ್ ಹಾಗೂ ಸಂಗಡಿಗರು ದುರ್ಗಪ್ಪ ಅವರ ಹೊಲಕ್ಕೆ ನುಗ್ಗಿ ಏಕಾಏಕಿ ಕೊಡಲಿ ಹಾಗೂ ಮಾರಕಾಸ್ತ್ರಗಳಿಂದ ದುರ್ಗಪ್ಪ ಹಾಗೂ ತಾಯಿ ದೇವಕ್ಕೆವ್ವ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆರೂರು ಪೊಲೀಸರು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೈಕ್ ಅಲ್ಲಿ ಬಂದು 14 ಜನ ದುಷ್ಕರ್ಮಿಗಳು ಸೇರಿ ಕೊಡಲಿಯಿಂದ ಕೊಚ್ಚಿ ಕೊಲೆಗೈದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ದೂರು ದಾಖಲಾಗಿದೆ. ತಪ್ಪಿಸಿಕೊಂಡ ಇನ್ನು 9 ಮಂದಿಗೆ ಪೊಲೀಸರು ಬಲೆ ಬೀಸಿದ್ದಾರೆ.