ಚಿಕ್ಕಮಗಳೂರು: ಮಲೆನಾಡು ಕಳೆದೊಂದು ವಾರದಿಂದ ಅಕ್ಷರಶಃ ಮಳೆ ನಾಡಾಗಿದೆ. ಇದರಿಂದ ಜಿಲ್ಲಾದ್ಯಂತ 120ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಯಾಗಿದರೆ, ಎರಡು ಮನೆಗಳು ಸಂಪೂರ್ಣ ನೆಲಸಮವಾಗಿದೆ. ಜೊತೆಗೆ ಮಲೆನಾಡು ಭಾಗದಲ್ಲಿ 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಇಂದಿಗೂ ಮಲೆನಾಡ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.
ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಸುಮಾರು 500ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮಲೆನಾಡಿನ ನೂರಾರು ಗ್ರಾಮಗಳು ಕಗ್ಗತ್ತಲಲ್ಲಿ ಬದುಕುವಂತಾಗಿದೆ. ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ತಂತಿಗಳು ರಸ್ತೆ ತುಂಬಾ ಹರಡಿಕೊಂಡಿವೆ. ಕೆಇಬಿಯವರು ಇಂದಿಗೂ ದುರಸ್ಥಿ ಮಾಡಲು ಸಾಧ್ಯವಾಗಿಲ್ಲ.
ಕೆಲ ಗ್ರಾಮಗಳು ಇಂದಿಗೂ ಕಗ್ಗತ್ತಲಲ್ಲಿ ಬದುಕುತ್ತಿವೆ. ಯುಪಿಎಸ್ ಇರುವಂತ ಮನೆಯವರು ಕೂಡ ಕರೆಂಟ್ ಕಾಣದೆ ನಾಲ್ಕು ದಿನ ಕಳೆದಿದೆ. ಈಗ ಆನ್‍ಲೈನ್ ಶಿಕ್ಷಣ ಆರಂಭವಾಗಿದೆ. ಮಲೆನಾಡಿನ ಮಕ್ಕಳು ವಿದ್ಯುತ್ ಇಲ್ಲದೆ, ಮೊಬೈಲ್ ಚಾರ್ಜ್ ಇಲ್ಲದೆ ಸೂಕ್ತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಯುಪಿಎಸ್ ಇದ್ದವರು ಕೇವಲ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಯುಪಿಎಸ್‍ಗಳನ್ನ ಬಳಸುತ್ತಿದ್ದಾರೆ. ಇದು ಮಲೆನಾಡ ಸದ್ಯದ ದುಸ್ಥಿತಿಯಾಗಿದೆ.
ಸರ್ಕಾರ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಒಂದು ವಾರಗಳ ಕಾಲ ನಿರಂತರವಾಗಿ ಸುರಿದ ಮಳೆ ಮಲೆನಾಡಿಗರ ಜನಜೀವನವನ್ನ ಅಸ್ತವ್ಯಸ್ತ ಮಾಡಿದೆ.