ಆರ್‌ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ- ವಿಶೇಷತೆ ಏನು?

Public TV
2 Min Read
smg amit shah

ಶಿವಮೊಗ್ಗ: ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾದ ಆರ್‌ಎಎಫ್(ರ‌್ಯಾಪಿಡ್ ಆಕ್ಷನ್ ಫೋರ್ಸ್ ) ಘಟಕದ ಶಂಕು ಸ್ಥಾಪನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ನೆರವೇರಿಸಿದ್ದಾರೆ.

ಜಿಲ್ಲೆಯ ಭದ್ರಾವತಿ ತಾಲೂಕಿನ ಬುಳ್ಳಾಪುರದ ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಭದ್ರಾವತಿಯ ಬೊಮ್ಮನಕಟ್ಟೆ ಹೆಲಿಪ್ಯಾಡ್ ಗೆ ಆಗಮಿಸಿದ ಅಮಿತ್ ಶಾ, ನೇರವಾಗಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದರು.

smg amit shah 5

ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ರಾಜ್ಯ ಸೇರಿದಂತೆ 38 ಜಿಲ್ಲೆಗಾಗಿ ಈ ಆರ್‍ಎಎಫ್ ತುಕಡಿ ಕಾರ್ಯ ನಿರ್ವಹಿಸಲಿದೆ. ಕರ್ನಾಟಕ, ಗೋವಾ, ಲಕ್ಷದ್ವೀಪ, ಪುದುಚೇರಿ, ಕೇರಳ ರಾಜ್ಯದ ವ್ಯಾಪ್ತಿಯಲ್ಲಿ ಆರ್‍ಎಎಫ್ ತಂಡ ಕೆಲಸ ಮಾಡಲಿದೆ. ಭದ್ರತೆ ಮಾತ್ರವಲ್ಲದೇ ಸಾಮಾಜಿಕ ಸೇವಾ ಕಾರ್ಯದಲ್ಲೂ ಆರ್‍ಎಎಫ್ ಯೋಧರು ತೊಡಗಿಸಿಕೊಳ್ಳಲಿದ್ದಾರೆ.

smg amit shah 4

ಭದ್ರಾವತಿಯ ಡಿಎಆರ್ ಮೈದಾನದಲ್ಲಿ ಸುಮಾರು 50 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾದ ಆರ್‍ಎಎಫ್ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಈ ಘಟಕ ಆರಂಭವಾಗುತ್ತಿರುವುದು ರಾಜ್ಯದ ಪಾಲಿಗೆ ಅದರಲ್ಲೂ ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಮುಕುಟವೇ ಸರಿ.

ಕರ್ನಾಟಕ, ಗೋವಾ, ಪಾಂಡಿಚೇರಿ ಹಾಗೂ ಕೇರಳದ 4 ಜಿಲ್ಲೆಗಳು ಸೇರಿದಂತೆ ಸುಮಾರು 38 ಜಿಲ್ಲೆಗಳ ವ್ಯಾಪ್ತಿಯಲ್ಲಿ ಆರ್‍ಎಎಫ್ ತಂಡ ಕಾರ್ಯ ನಿರ್ವಹಿಸಲಿದ್ದು, ಭದ್ರಾವತಿ ಇದರ ಕೇಂದ್ರ ಸ್ಥಾನವಾಗಿ ಇರಲಿದೆ.

smg amit shah 2

ಈಗಾಗಲೇ ಭದ್ರಾವತಿಯ ಆರ್‍ಎಎಫ್ ಘಟಕಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದ್ದು, ಇವರು ಉಳಿದುಕೊಳ್ಳಲು ತಾತ್ಕಾಲಿಕವಾಗಿ ವಿಐಎಸ್ ಎಲ್ ಮತ್ತು ಎಂಪಿಎಂ ನ ವಸತಿ ಗೃಹಗಳು ಹಾಗೂ ಗೋದಾಮುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಕಮಾಡೆಂಟ್, 6 ಮಂದಿ ಸಹಾಯಕ ಕಮಾಡೆಂಟ್, 16 ಮಂದಿ ಇನ್‍ಸ್ಪೆಕ್ಟರ್, 32 ಮಂದಿ ಸಬ್ ಇನ್‍ಸ್ಪೆಕ್ಟರ್, 34 ಮಂದಿ ಸಹಾಯಕ ಸಬ್ ಇನ್‍ಸ್ಪೆಕ್ಟರ್, 56 ಮುಖ್ಯಪೇದೆ, 46 ಮಹಿಳಾ ಪೇದೆ, ಇತರೆ 298 ಮಂದಿ ಸೇರಿದಂತೆ ಈ ತಂಡದಲ್ಲಿ ಸುಮಾರು 445 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

smg amit shah 3

ಕೇಂದ್ರ ಗೃಹ ಸಚಿವ, ಬಿಜೆಪಿಯ ಚಾಣಕ್ಯ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಡೀ ಭದ್ರಾವತಿಯನ್ನು ಅಲಂಕರಿಸಲಾಗಿದೆ. ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಇಲಾಖೆ ಕೈಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *