ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಬಾರಿ ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುನಿರತ್ನ 1,25,734 ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 67,798 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಕೇಶವಮೂರ್ತಿ 10,251 ಮತಗಳನ್ನು ಪಡೆದಿದ್ದಾರೆ. ಒಟ್ಟು 57,936 ಮತಗಳ ಅಂತರದಿಂದ ಮುನಿರತ್ನ ಈ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಗೆಲುವಿಗೆ ಕಾರಣ ಏನು?
ಆರ್ ಆರ್ ನಗರದಲ್ಲಿ ಎರಡು ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಮುನಿರತ್ನ ಅವರ ಕೈ ಹಿಡಿದಿದೆ. ಇದರ ಜೊತೆಯಲ್ಲಿ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ವೈಯಕ್ತಿಕವಾಗಿ ಇರುವ ವರ್ಚಸ್ಸು ನೆರವಾಗಿದೆ.
ಆರ್ ಆರ್ ನಗರ ಕ್ಷೇತ್ರದ ಜನತೆಗೆ ಮುನಿರತ್ನ ಪರಿಚಯದ ಮುಖ, ಕೈಗೆ ಸುಲಭವಾಗಿ ಸಿಗುವ ಜನಪ್ರತಿನಿಧಿ ಎಂಬ ಭಾವನೆ ಇದೆ. ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ಕ್ಷೇತ್ರದ ಬಡಜನರಿಗೆ ರೇಷನ್ ಕಿಟ್ ವಿತರಣೆ, ಆರ್ಥಿಕ ನೆರವು ಕೊಟ್ಟಿದ್ದು ಸಹಾಯ ಮಾಡಿದೆ.
ಮನಿರತ್ನ ಗೆದ್ದರೆ ಸಚಿವರಾಗುವುದಾಗಿ ಖುದ್ದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಅಷ್ಟೇ ಸಚಿವರು, ಬಿಜೆಪಿ ನಾಯಕರು ಕೇಡರ್ ಬೇಸ್ ಕಾರ್ಯತಂತ್ರಗಳನ್ನು ನಡೆಸಿ ಪ್ರಚಾರ ನಡೆಸಿದ್ದರು.
ತಮ್ಮ ಪ್ರಚಾರ ಭಾಷಣದಲ್ಲಿ ಕಾಂಗ್ರೆಸ್ ಹೊರಗಿನ ಜನರನ್ನ ಕರೆತಂದು ಅಶಾಂತಿ ಉಂಟುಮಾಡ್ತಿದ್ದಾರೆ ಎಂದು ಆರೋಪಿಸಿ ಪ್ರಚಾರ ಮಾಡಿದ್ದರು. ಇದರ ಜೊತೆ ಜೆಡಿಎಸ್, ಹೆಚ್ ಡಿಕೆ, ದೇವೇಗೌಡರ ಬಗ್ಗೆ ಪ್ರಚಾರದ ಉದ್ದಕ್ಕೂ ಸಾಫ್ಟ್ ಕಾರ್ನರ್ ತೋರಿದ್ದು ಮುನಿರತ್ನ ಅವರ ಕೈ ಹಿಡಿದಿದೆ.