ಆಪರೇಷನ್ ಕಮಲ ಸಕ್ಸಸ್ – ಹುಕ್ಕೇರಿ ಪುರಸಭೆ ಬಿಜೆಪಿ ಮಡಿಲಿಗೆ

Public TV
1 Min Read
Hukeri

– ಕತ್ತಿ ಬದ್ರರ್ಸ್ ಪ್ಲಾನ್ ಯಶಸ್ವಿ
– 12 ರಲ್ಲಿ 11 ‘ಕೈ’ ಸದಸ್ಯರು ಬಿಜೆಪಿ ಸೇರ್ಪಡೆ

ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಹುಕ್ಕೇರಿ ಪುರಸಭೆಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಸ್ಥಳೀಯ ಮಟ್ಟದಲ್ಲಿ ಆಪರೇಷನ್ ಕಮಲದ ಮೂಲಕ ಹುಕ್ಕೇರಿ ಪುರಸಭೆಯನ್ನ ಬಿಜೆಪಿ ವಶಕ್ಕೆ ಪಡೆದಿದೆ.

Hukkeri 4

ಹುಕ್ಕೇರಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯ ಬಲದ ಪುರಸಭೆಗೆ ಕಾಂಗ್ರೆಸ್ ನಿಂದ 12, ಬಿಜೆಪಿಯಿಂದ 8 ಹಾಗೂ 3 ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಚುನಾವಣೆ ಕೊನೆ ಗಳಿಗೆಯಲ್ಲಿ ಭಾರೀ ಹೈಡ್ರಾಮಾ ನಡದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಮಾಸ್ಟರ್ ಪ್ಲಾನ್ ಯಶಸ್ವಿಯಾಯಿತು.

Hukkeri 2

ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತೊರೆದು ನಾಲ್ಕು ಜನ ಪುರಸಭೆ ಸದಸ್ಯರು ಬಿಜೆಪಿ ಸೇರಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಯಿತು. ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರ್ಪಡೆಯಾದರು.

Hukkeri 3

ಕಾಂಗ್ರೆಸ್ ತೊರೆದು ಬಂದ ಅಣ್ಣಪ್ಪಾ ಪಾಟೀಲರಿಗೆ ಅಧ್ಯಕ್ಷ ಸ್ಥಾನ, ಪಕ್ಷೇತರ ಅಭ್ಯರ್ಥಿ ಆನಂಸ್ ಗಂಧ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಅಣ್ಣಪ್ಪಾ ಪಾಟೀಲ್ ಅವರಿಗೆ 23 ಮತಗಳು ಚಲಾವಣೆಗೆಯಾಗುವ ಮೂಲಕ ಕಾಂಗ್ರೆಸ್ ಗೆ ಭಾರಿ ಮುಖಭಂಗವಾಯಿತು. ಚುನಾವಣೆಯಲ್ಲಿ 12 ಜನ ಕಾಂಗ್ರೆಸ್ ಸದಸ್ಯರ ಪೈಕಿ 11 ಜನ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿ ಎಲ್ಲರೂ ಬಿಜೆಪಿ ಸೇರ್ಪಡೆಯಾದರು.

Hukkeri 1 1

ಈ ವೇಳೆ ಮಾತನಾಡಿದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಉಮೇಶ್ ಕತ್ತಿ, ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ನ ನಾಲ್ವರು ಸದಸ್ಯರು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್, ಬಿಜೆಪಿ ಎಲ್ಲ ಸದಸ್ಯರು ಕೂಡಿಕೊಂಡು ಹುಕ್ಕೇರಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.

Share This Article