– ಐದು ಭಾಷೆಗಳಲ್ಲಿ ಆದಿಪುರುಷ
ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದು, ಬಾಹುಬಲಿ ಎರಡು ಸರಣಿ ಸಿನಿಮಾಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇತ್ತೀಚೆಗಷ್ಟೇ ‘ರಾಧೆ ಶ್ಯಾಮ್’ ಸಿನಿಮಾಗೆ ಸಹಿ ಹಾಕಿದ್ದ ಪ್ರಭಾಸ್, ಇದೀಗ ಅವರ ಮತ್ತೊಂದು ಸಿನಿಮಾ ಕುರಿತು ಘೋಷಣೆ ಹೊರ ಬಿದ್ದಿದೆ. ಸಿನಿಮಾ ಹೆಸರಿನ ಮೂಲಕವೇ ಅವರ ಅಭಿಮಾನಿಗಳಲ್ಲಿ ಕಾತರತೆಯನ್ನು ಮೂಡಿಸಿದೆ.
ಬಾಹುಬಲಿ ಸರಣಿ ಸಿನಿಮಾಗಳ ಮೂಲಕ ದಾಖಲೆ ನಿರ್ಮಿಸಿದ್ದ ಯಂಗ್ ರೆಬೆಲ್ ಸ್ಟಾರ್ ನಂತರ ಸಾಹೋ ಸಿನಿಮಾ ಮೂಲಕ ಧೂಳೆಬ್ಬಿಸಿದ್ದರು. ಕೆಲ ದಿನಗಳ ಕಾಲ ಬ್ರೇಕ್ ಪಡೆದಿದ್ದ ಪ್ರಭಾ, ಲಾಕ್‍ಡೌನ್ ವೇಳೆಯಲ್ಲಿ ‘ರಾಧೆ ಶ್ಯಾಮ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳ ಕಾತರಕ್ಕೆ ತೆರೆ ಎಳೆದಿದ್ದರು. ಇದೀಗ ಮತ್ತೊಂದು ಸಿನಿಮಾ ಕುರಿತು ಘೋಷಣೆ ಹೊರ ಬಿದ್ದಿದ್ದು, ‘ಆದಿಪುರುಷ’ ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಕುರಿತು ಸಿನಿಮಾದ ನಿರ್ದೇಶಕ ಓಂ ರಾವತ್ ಅವರು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ.
ಸೋಮವಾರ ಸಂಜೆಯಿಂದಲೇ ಈ ಕುರಿತು ಸುದ್ದಿ ಹರಿದಾಡುತ್ತಿತ್ತು. ಬಳಿಕ ವಿಡಿಯೋ ಪೋಸ್ಟ್ ಮೂಲಕ ಸ್ವತಃ ಪ್ರಭಾಸ್ ಅವರೇ ಈ ಕುರಿತು ಬಹಿರಂಗಪಡಿಸಿ, ನಾಳೆ ಬೆಳಗ್ಗೆ 7.11ರ ಘೋಷಣೆಗೆ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಯಾವ ಘೋಷಣೆ ಎಂದು ಅಭಿಮಾನಿಗಳು ಸಹ ಅಷ್ಟೇ ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಹೊಸ ಸಿನಿಮಾ ‘ಆದಿಪುರುಷ’ದ ಹೊಸ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ.
Celebrating the victory of good over evil! – #Prabhas #Adipurush@omraut @ItsBhushanKumar @vfxwaala @rajeshnair06 @TSeries @RETROPHILES1 pic.twitter.com/QUGUW21DTt
— Prabhas (@PrabhasRaju) August 18, 2020
ಫಸ್ಟ್ ಲುಕ್ ಪೋಸ್ಟರ್ ಪುರಾಣ ಕಥೆಗಳನ್ನು ಬಿಂಬಿಸುವಂತಿದ್ದು, ಒಂದೇ ಪೋಸ್ಟ್‍ನ ಎ ಅಕ್ಷರದಲ್ಲಿ ರುದ್ರ ತಾಂಡವವಾಡುತ್ತಿರುವ ಆದಿಪುರುಷ ಶಿವ, ಗಧೆ ಹಿಡಿದ ಹನುಮಂತ, ಬಿಲ್ಲು ಹಿಡಿದ ರಾಮ, ಕೆಳಗೆ ಹತ್ತು ತಲೆಗಳ ರಾವಣನ ಚಿತ್ರವಿದೆ. ಹೀಗಾಗಿ ಯಾವ ರೀತಿಯ ಕಥಾ ಹಂದರ ಹೆಣೆಯಲಾಗಿದೆ ಎಂಬುದು ಸಧ್ಯ ಅಭಿಮಾನಿಗಳ ಪ್ರಶ್ನೆ. ಇನ್ನೂ ವಿಶೇಷ ಎಂಬಂತೆ ಕನ್ನಡ. ತೆಲುಗು, ಹಿಂದಿ, ತಮಿಳು, ಮಲಯಾಳಂ ಒಟ್ಟು 5 ಭಾಷೆಗಳಲ್ಲಿ ಸಿನಿಮಾ ತಯಾರಾಗಲಿದೆ. ಅಲ್ಲದೆ 3ಡಿ ಸಿನಿಮಾ ಇದಾಗಿದೆ.
ಎ ಅಕ್ಷರದ ಕೆಳಗೆ ಸಬ್ ಟೈಟಲ್ ಸಹ ಹಾಕಿದ್ದು, ಸೆಲೆಬ್ರೇಟಿಂಗ್ ವಿಕ್ಟರಿ ಆಫ್ ಗುಡ್ ಓವರ್ ಇವಿಲ್ ಎಂದು ಬರೆಯಲಾಗಿದೆ. ಓಂ ರಾವತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಯಾವ ರೀತಿ ಮೂಡಿ ಬರಲಿದೆ ಕಾದು ನೋಡಬೇಕಿದೆ.